ನ್ಯೂಸ್

ನಿರ್ಗತಿಕ ವೃದ್ಧೆಗೆ ಹೊಸ ಮನೆ ನಿರ್ಮಿಸಿಕೊಟ್ಟ ಎಸ್​ಐ: ಇವರ ಕತೆ ಕೇಳಿದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ!

ಹೈದರಾಬಾದ್​: ಪೊಲೀಸರೆಂದರೆ ಇಂದು ಮೂಗು ಮುರಿಯುವರೇ ಹೆಚ್ಚು. ಆದರೆ, ಎಲ್ಲ ಪೊಲೀಸರು ಒಂದೇ ರೀತಿಯಲ್ಲ, ಅವರಲ್ಲೂ ಮಾನವೀಯ ಗುಣಗಳು ಹಾಗೂ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿದೆ ಎಂಬುದನ್ನು ತೆಲಂಗಾಣ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಸಾಬೀತು ಮಾಡುವ ಮೂಲಕ ಓರ್ವ ಸರ್ಕಾರಿ ನೌಕರನ ಕರ್ತವ್ಯ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಂದಹಾಗೆ ಈ ಸ್ಟೋರಿಯಲ್ಲಿ ಬರುವ ಪೊಲೀಸ್​ ಹೀರೋ ಹೆಸರು ಗುಂದ್ರಥಿ ಸತೀಶ್​, ಇವರು ಪಲಕುರ್ತಿ ಠಾಣೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಾಡಿರುವ ಮಾನವೀಯ ಕೆಲಸದ ಬಗ್ಗೆ ಹೇಳುವುದಾರೆ, ಪ್ರವಾಹದಲ್ಲಿ ಮನೆ ಕಳೆದುಕೊಂಡು ನಿರ್ಗತಿಕಳಾಗಿದ್ದ ವಾರಂಗಲ್​ ಜಿಲ್ಲೆಯ ಲಕ್ಷ್ಮಿನಾರಾಣಪುರಂ ಗ್ರಾಮದ 70 ವರ್ಷದ ಮಹಿಳೆಗೆ ತಮ್ಮದೇ ಹಣದಲ್ಲಿ ದೊಡ್ಡ ಮನಸ್ಸಿನಿಂದ ಒಂದು ಪುಟ್ಟ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಸ್ಟೋರಿಯ ವಿವರಣೆಗೆ ಬರುವುದಾದರೆ, ಸತೀಶ್​, ರಾಜಮ್ಮರನ್ನು ಕಳೆದ ಅಕ್ಟೋಬರ್​ನಲ್ಲಿ ಭೇಟಿಯಾಗಿದ್ದರು. ಭೇಟಿಗೆ ಮೂಲ ಕಾರಣವೇ ತೆಲಂಗಾಣದಲ್ಲಿ ಸಂಭವಿಸಿದ ಪ್ರವಾಹ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ರಾಜಮ್ಮರನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು. ಈ ವೇಳೆ ರಾಜಮ್ಮರ ಮನೆ ಸಂಪೂರ್ಣ ಹಾಳಾಗಿದ್ದನ್ನು ಸತೀಶ್​ ನೋಡಿ ದುಃಖಿತರಾಗಿದ್ದರು. ಅಲ್ಲದೆ, ಪ್ರವಾಹ ಭೀತಿ ಹೆಚ್ಚಾಗಿದ್ದರಿಂದ ರಾಜಮ್ಮರನ್ನು ಸರ್ಕಾರಿ ಆಶ್ರಯ ಶಿಬಿರಕ್ಕೆ ರವಾನಿಸಿ ಅವರೊಂದಿಗೆ ಮಾತನಾಡಿ ಕಷ್ಟವನ್ನು ಆಲಿಸಿದ್ದರು.

ಇನ್ನು ರಾಜಮ್ಮ ಕಡುಬಡವರು. ಯಾರೊಬ್ಬರ ಅವರನ್ನು ನೋಡಿಕೊಳ್ಳುತ್ತಿಲ್ಲ. ಅವರ ಸೊಸೆ ಮತ್ತು ಮೊಮ್ಮಗಳು ಹಾವು ಕಡಿತದಿಂದ ದುರಂತ ಸಾವಿಗೀಡಾಗಿದ್ದಾರೆ. ಆಕೆಯ ಮಗ ವಿಕಲಾಂಗನಾಗಿದ್ದು, ತಾಯಿಯನ್ನು ನೋಡಿಕೊಳ್ಳದೆ ಆಕೆಯನ್ನು ತೊರೆದಿದ್ದಾನೆ. ಆ ಪುಟ್ಟ ಮನೆಯಲ್ಲಿ ಮೂವರು ಅದು ಹೇಗೆ ವಾಸಿಸುತ್ತಿದ್ದರೋ ತಿಳಿಯುತ್ತಿಲ್ಲ. ಒಬ್ಬನೇ ವ್ಯಕ್ತಿ ಆ ಮನೆಯಲ್ಲಿ ವಾಸಿಸುವಷ್ಟು ಯೋಗ್ಯವಾಗಿರಲಿಲ್ಲ ಎಂದು ಎಸ್​ಐ ಸತೀಶ್​ ಭಾವುಕರಾದರು.

ಇತ್ತ ಆಕೆಯ ನೋವಿನ ಕತೆ ಕೇಳಿದ್ದ ಸತೀಶ್​ ರಕ್ಷಣಾ ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ರಾಜಮ್ಮರನ್ನು ಭೇಟಿ ಮಾಡಿ ಹೊಸ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಮಾತು ಕೊಟ್ಟಂತೆ ನಡೆದುಕೊಂಡ ಎಸ್​ಐ ಪ್ರವಾಹದಿಂದ ಹಾಳಾಗಿದ್ದ ಮನೆಯನ್ನು ಕೆಡವಿ ಕೇವಲ 3 ತಿಂಗಳ ಒಳಗೆ ದಾನಿಗಳ ಸಹಾಯದಿಂದ 1,60,000 ರೂ. ಖರ್ಚಿನಲ್ಲಿ ಹೊಸ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಒಟ್ಟು ಖರ್ಚಿನಲ್ಲಿ ಎಸ್​ಐ ಸತೀಶ್​ ಅರ್ಧದಷ್ಟು ಹಣ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸತೀಶ್​, ರಾಜಮ್ಮ ಅವರ ಕತೆ ಕೇಳಿ ನನಗೆ ನೋವಾಯಿತು. ದುಃಖದಿಂದ ಅವರನ್ನು ಹೊರ ಕರೆತರಲು ಏನಾದರೂ ಸಹಾಯ ಮಾಡಬೇಕೆಂದು ಬಯಸಿದೆ. ಹೀಗಾಗಿ ಮನೆ ನಿರ್ಮಿಸಿಕೊಡುವ ಯೋಚನೆ ಬಂತು. ಬಳಿಕ ದಾನಿಗಳ ನೆರವು ಪಡೆದು ಸದೃಢವಾದ ಮನೆಯನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದರು.

ಇನ್ನು ಸತೀಶ್​ ಅವರ ಪರೋಪಕಾರಿ ಕೆಲಸ ಇದೇ ಮೊದಲೇನಲ್ಲ. ಅನೇಕ ವರ್ಷಗಳಿಂದ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚುತ್ತಲೇ ಬಂದಿದ್ದಾರೆ. ಸತೀಶ್​ ಅವರ ಕಾರ್ಯಕ್ಕೆ ಅವರ ಸಹೋದ್ಯೋಗಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪೊಲೀಸರೆಂದರೆ ನೂರು-ಇನ್ನೂರಕ್ಕೆ ಕೈ ಒಡ್ಡುವವರು ಎಂದು ಹಾಡಿಕೊಳ್ಳುವ ಜನರೆದುರು ಪೊಲೀಸರೆಂದರೆ ಹೀಗಿರಬೇಕು ಎಂದು ಸತೀಶ್​ ತೋರಿಸಿಕೊಟ್ಟಿದ್ದಾರೆ. ಅವರ ಸೇವೆ ಇನ್ನಷ್ಟು ಜನರಿಗೆ ಲಭಿಸುವಂತಾಗಲಿ ಮತ್ತು ಅವರೂ ಸಹ ದೇವರ ಆಶೀರ್ವಾದದೊಂದಿಗೆ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಿ ಎಂಬುದೇ ಎಲ್ಲರ ಹಾರೈಕೆಯಾಗಿದೆ. (ಏಜೆನ್ಸೀಸ್​)