ನ್ಯೂಸ್

ಮೋಟಾರ್ ರಿವೈಂಡಿಂಗ್ ಮೇಸ್ತ್ರಿ ಪುತ್ರಿ ರಾಜ್ಯಕ್ಕೆ 3ನೇ ರ‍್ಯಾಂಕ್; ಸಿಎ ಓದಿಸಲು ಮನೆ ಅಡವಿಟ್ಟ ತಂದೆ

ಬೆಳಗಾವಿ: ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು (ಏಪ್ರಿಲ್​ 08) ಮಧ್ಯಾಹ್ನ 12.50ಕ್ಕೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಫಲಿತಾಂಶವನ್ನು ಮಂಡಳಿಯ ವೆಬ್‌ಸೈಟ್ http//karresults.nic.in ನಲ್ಲಿ ಬಿಡುಗಡೆಗೊಳಿಸಿತು. ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ. 93.90 ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಯಾದಿಗಿರಿ ಜಿಲ್ಲೆ ಶೇ 48.45 ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದಿನ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಬಡ ವ್ಯಕ್ತಿಯ ಪುತ್ರಿ ಸಾಧನೆ

ಈಕೆ ಎಲ್ಲರಂತೆ ಟ್ಯೂಷನ್ ಹೇಳಿಸಿಕೊಳ್ಳಲಿಲ್ಲ. ತಂದೆಯ ದುಡಿಮೆಯಲ್ಲಿ ಬರುವ ಅಲ್ಪ-ಸ್ವಲ್ಪ ಆದಾಯದಲ್ಲಿ ಕುಟುಂಬದ ನಿರ್ವಹಣೆ, ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿನಿ. ಆರ್ಥಿಕ ಒತ್ತಡಗಳು ವಿದ್ಯೆಗೆ ಅಡ್ಡಿಯಾದರೂ ಓದುವ ಛಲ ಬಿಡದೆ, ಇಂದು ಸಾಧನೆಯ ಮೈಲಿಗಲ್ಲು ತಲುಪಿದ್ದಾಳೆ. ಈಕೆಯ ಸಾಧನೆ ಹಲವರಿಗೆ ಸ್ಫೂರ್ತಿದಾಯಕ ಎಂದರೆ ಖಂಡಿತ ತಪ್ಪಾಗಲಾರದು. ಇದು ಬೆಳಗಾವಿ ಅನಗೋಳದ ಬುಡಾ ಕಾಲೋನಿಯ ಮೋಟಾರ್ ರಿವೈಂಡಿಂಗ್ ಮೇಸ್ತ್ರಿ ಹೇಮಂತ ಪಾಟೀಲ ಎಂಬುವವರ ಪುತ್ರಿ ತನ್ವಿ ಪಾಟೀಲ ಅವರ ಯಶೋಗಾಥೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 597 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ. ಆಗಾಗ ಮನೆಯಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನ ನಡುವೆಯೂ ದಿನಕ್ಕೆ 8ರಿಂದ 10 ಗಂಟೆ ಓದುವ ಮೂಲಕ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ. ಸಾಧನೆಗೆ ಬಡತನ ಅಡ್ಡಿಯಿಲ್ಲ ಎಂಬ ಮಾತನ್ನು ಈಕೆ ಮತ್ತೊಮ್ಮೆ ಸಾಬೀತುಪಡಿಸಿದ್ದಾಳೆ. ಮಧ್ಯಮ ವರ್ಗದಲ್ಲಿ ಜನಿಸಿ ಬಡತನ ಮಧ್ಯ ಬೆಳೆದ ತನ್ವಿ ಪಾಟೀಲ, ತಮ್ಮ ತಂದೆಯ ಅಲ್ಪ ಆದಾಯದಲ್ಲಿಯೇ ತನ್ನ ಶಿಕ್ಷಣ ಮುಂದುವರಿಸಿದ್ದಳು. ತನ್ನ ಓದು ತಂದೆಗೆ ಹೊರೆಯಾಗದಂತೆ ಯಾವುದೇ ಟ್ಯೂಷನ್ ಕ್ಲಾಸ್ ಹೋಗದೆ ಮನೆಯಲ್ಲಿಯೇ ಅಧ್ಯಯನ ಮಾಡಿದ್ದಾಳೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕ ಪಡೆದು ರಾಜ್ಯಕ್ಕೆ ಟಾಪ್ ಹತ್ತರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ತನ್ವಿ, ಪ್ರಥಮ ಪಿಯುಸಿಯಲ್ಲಿ ಶೇ.98 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಇದೀಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಶ್ರೇಣಿ ಪಡೆದುಕೊಂಡಿರುವುದು ಪೋಷಕರು ಮತ್ತು ಕಾಲೇಜಿನ ಶಿಕ್ಷಕರಿಗೆ ಹೆಮ್ಮೆಯ ಸಂಗತಿ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಕುಟುಂಬ ಹಿನ್ನೆಲೆ

ಕಳೆದ ಮೂವತ್ತು ವರ್ಷಗಳಿಂದ ಮಿಕ್ಸಿ, ಮೋಟಾರ್ ರಿವೈಂಡಿಂಗ್ ಕೆಲಸ ಮಾಡಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಹೇಮಂತ ಪಾಟೀಲ ಮತ್ತು ಸಂಗೀತಾ ಪಾಟೀಲ ಅವರು ತಮ್ಮ ಇಬ್ಬರು ಮಕ್ಕಳ ಕಲಿಕೆಗೆ ಬಡತನ ಅಡ್ಡಿಯಾಗದಂತೆ ಓದಿಸುತ್ತಿದ್ದಾರೆ. ಆದರೆ, ಮಕ್ಕಳ ಶಿಕ್ಷಣಕ್ಕಾಗಿ ಯಾರ ಬಳಿ ಕೈಚಾಚದೆ ತಮ್ಮ ದುಡಿಮೆಯಿಂದ ಬರುವ ಆದಾಯದಲ್ಲಿ ಕಲಿಸಿರುವುದು ಹೆಮ್ಮೆಯ ವಿಷಯ. ಇದೀಗ ಪುತ್ರಿ ತನ್ವಿ ಪಾಟೀಲಳನ್ನು ‘ಸಿಎ’ ಓದಿಸಬೇಕು ಎಂಬ ಏಕೈಕ ಉದ್ದೇಶದಿಂದ ತಮ್ಮ ಮನೆಯನ್ನು ಬ್ಯಾಂಕಿನಲ್ಲಿ ಅಡವಿಟ್ಟು 1.50 ಲಕ್ಷ ರೂ. ಸಾಲ ಪಡೆದು ಮಹಾರಾಷ್ಟ್ರದ ಪುಣೆಯಲ್ಲಿ ಸಿಎ ಕೋಚಿಂಗ್ ಕ್ಲಾಸ್‌ಗೆ ಸೇರಿಸಿದ್ದಾರೆ.