ನ್ಯೂಸ್

VIDEO| ಮಗಳಿಗೆ ತಂದ ಗೊಂಬೆಯ ಜನನಾಂಗದಲ್ಲಿ ಬಟನ್: ಒತ್ತಿದ್ದ ಕೂಡಲೇ ಶಬ್ದ ಕೇಳಿ ಬೆಚ್ಚಿದ ಮಹಿಳೆ!

ನ್ಯೂಯಾರ್ಕ್​: ಮಗಳ ಹುಟ್ಟುಹಬ್ಬದ ಉಡುಗೊರೆಯಾಗಿ ತಂದಂತಹ ಪ್ರಖ್ಯಾತ್​ ಟ್ರಾಲ್ಸ್​ ಗೊಂಬೆಯ ಗಿಫ್ಟ್​ ಕವರ್​ ತೆರೆದು ಗೊಂಬೆ ವೀಕ್ಷಿಸಿದ ಮಹಿಳೆಗೆ ಮುಜುಗರಪಡುವಂತಹ ಸನ್ನಿವೇಶವೊಂದು ಎದುರಾದಂತಹ ಘಟನೆ ದೂರದ ಅಮೆರಿಕದಲ್ಲಿ ನಡೆದಿದೆ.

ಹೆಸರೇಳಲು ಇಚ್ಛಿಸದ ಅಮೆರಿಕ ಮಹಿಳೆ ನಡೆದ ಘಟನಯನ್ನು ವಿವರಿಸಿದ್ದಾಳೆ. ಹಸ್ಬ್ರೊ ಕಂಪನಿಯ ಟ್ರಾಲ್ಸ್​ ವರ್ಲ್ಡ್​ ಟೂರ್​ ಗಿಗಲ್​​ ಮತ್ತು ಸಿಂಗ್​ ಪಾಪಿ ಡಾಲ್​ ಅನ್ನು ತನ್ನ ಎರಡು ವರ್ಷದ ಮಗಳ ಬರ್ತಡೇಗಾಗಿ ಮಹಿಳೆ ಕೊಂಡು ತಂದಿದ್ದಳು. ಬರ್ತಡೇ ದಿನದಂದು ಗಿಫ್ಟ್​ ಕವರ್​ ತೆರೆದು ಗೊಂಬೆಯನ್ನು ವೀಕ್ಷಿಸಿದ ಆಕೆಗೆ ಶಾಕ್​ ಆಗಿದೆ.

ಗೊಂಬೆಯ ಜನನಾಂಗದ ಸ್ಥಳದಲ್ಲಿನ ಬಟನ್​ ಅನ್ನು ಒತ್ತಿದರೆ ಅದರಿಂದ ಸೆಕ್ಸುವಲ್​ ಸೌಂಡ್​ ಕೇಳಿ ಮಹಿಳೆ ಕಕ್ಕಾಬಿಕ್ಕಿಯಾಗಿದ್ದಾಳೆ. ಘಟನೆಯಿಂದ ಮುಜುಗರಕ್ಕೀಡಾಗಿರುವ ಮಹಿಳೆ ಅದನ್ನು ಖಂಡಿಸಿದ್ದಾಳೆ. ಅಲ್ಲದೆ, ಮತ್ತೊರ್ವ ಮಹಿಳೆ ಇದು ಶಿಶುಕಾಮವೆಂದು ಆರೋಪಿಸಿ, ಘಟನೆಯನ್ನು ಖಂಡಿಸಿ ನ್ಯಾಯಾಲಯ ಮೆಟ್ಟಿಲೇರಿದ್ದಾಳೆ. ಇದರ ಬೆನ್ನಲ್ಲೇ ಈ ರೀತಿಯ ಗೊಂಬೆಯನ್ನು ಸ್ಟೋರ್​ನಿಂದ ತೆಗೆದುಹಾಕಲಾಗಿದ್ದು, ಮಾರಾಟವನ್ನು ನಿಲ್ಲಿಸಲಾಗಿದೆ.

ಜೆಸ್ಸಿಕಾ ಎಂಬ ಮಹಿಳೆ ಸುಮಾರು 253,283 ಸಹಿ ಸಂಗ್ರಹವುಳ್ಳ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಶಿಶುಕಾಮವು ಸರಿ ಎಂದು ಮಕ್ಕಳು ಚಿಂತಿಸುವುದರ ಮೇಲೆ ನಮ್ಮ ಸಮಾಜ ಷರತ್ತು ವಿಧಿಸಿದೆ. ಆದರೆ, ಈ ಟ್ರೋಲ್ಸ್​ ವರ್ಲ್ಡ್​ ಡಾಲ್​ನ ಖಾಸಗಿ ಭಾಗದಲ್ಲಿನ ಬಟನ್​ ಒತ್ತಿದರೆ, ಸೆಕ್ಸುವಲ್​ ಸೌಂಡ್​ ಬರುತ್ತದೆ. ಇದು ಮಕ್ಕಳ ಗೊಂಬೆಯಲ್ಲಿರುವುದು ಒಳ್ಳೆಯದಲ್ಲ. ನಮ್ಮ ಸ್ಟೋರ್​ಗಳಲ್ಲಿ ಈ ರೀತಿಯ ಗೊಂಬೆಯನ್ನು ತೆಗೆಯಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇದನ್ನು ಫನ್​ಗಾಗಿ ಮಾಡಿರುವುದೇ ಆದರೆ, ಇದು ಮಕ್ಕಳ ಮೇಲೆಯೂ ಪರಿಣಾಮ ಬೀರುತ್ತದೆ. ಇದು ಶಿಶುಕಾಮಕ್ಕೆ ಪ್ರಚೋದನೆ ನೀಡುತ್ತದೆ. ಇದು ಸರಿಯಿಲ್ಲ ಮತ್ತು ಫನ್​ ಕೂಡ ಅಲ್ಲ. ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಇದು ದೀರ್ಘಕಾಲ ಪರಿಣಾಮ ಬೀರುತ್ತದೆ ಎಂದು ಜಸ್ಸಿಕಾ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.

ಇದೀಗ ಗೊಂಬೆ ಸೆಕ್ಸುವಲ್​ ಸೌಂಡ್​ ಮಾಡುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ಸಾಕಷ್ಟು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅದರ ಮಾರಾಟವನ್ನು ನಿಲ್ಲಿಸಿ, ಪಾಲಕರ ಕ್ಷಮೆಯಾಚಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಇದೊಂದು ಆಕಸ್ಮಿಕ ಎಂದು ಕಂಪನಿ ಹೇಳಿದೆ.

ಗೊಂಬೆಯು ಟ್ರೋಲ್ಸ್​ ಸಿನಿಮಾದ ಸ್ಪೂರ್ತಿಯಿಂದ ತಯಾರಾಗಿದೆ. ಟ್ರೋಲ್​ ಸಿನಿಮಾ 2016ರಲ್ಲಿ ಬಿಡುಗಡೆಯಾಯಿತು. ಇದರ ಮುಂದುವರಿದ ಭಾಗ ಟ್ರೋಲ್ಸ್​ ವರ್ಲ್ಡ್​ ಟೂರ್​ ಈ ವರ್ಷದ ಮಾರ್ಚ್​ನಲ್ಲಿ ಪ್ರೀಮಿಯರ್​ ಆಯಿತು. ಈ ಚಿತ್ರದಲ್ಲಿ ಬರುವ ಪಪ್ಪಿ ಪಾತ್ರದ ಗೊಂಬೆ ಇದಾಗಿದೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)