ನ್ಯೂಸ್

ಅಮ್ಮನ ದಿನಕ್ಕೊಂದು ವಿಶೇಷ- ಕ್ಲಿಕ್​ ಮಾಡಿ, ಸುಂದರ ಗಿಫ್ಟ್​ ನೀಡಿ

ನವದೆಹಲಿ: ಹಾಗೆ ನೋಡಿದರೆ ಪ್ರತಿ ದಿನವೂ ಅಮ್ಮನ ದಿನವೇ. ಆದರೆ ಧಾವಂತದ ಬದುಕಿನಲ್ಲಿ ಎಷ್ಟೋ ಮಂದಿ ಅಮ್ಮನ ಪ್ರೀತಿ, ವಾತ್ಸಲ್ಯ, ತ್ಯಾಗ ಎಲ್ಲವನ್ನೂ ಮರೆತುಬಿಡುತ್ತಾರೆ. ಅಂಥವರಿಗೆ ಅಮ್ಮನನ್ನು ನೆನಪಿಸುವ ಸಲುವಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ.

ವಿಶೇಷ ಸಂದರ್ಭಗಳನ್ನು ಗೂಗಲ್ ಕಂಪೆನಿ​, ಡೂಡಲ್​ ಮೂಲಕ ವಿಶಿಷ್ಟವಾಗಿ ಆಚರಿಸುತ್ತದೆ. ಯಾವುದಾದರೂ ಗಣ್ಯರ ಜನ್ಮದಿನ, ಪುಣ್ಯತಿಥಿ ಅಥವಾ ಇನ್ನಾವುದೇ ವಿಶೇಷ ದಿನಗಳನ್ನು ಡೂಡಲ್​ ಮೂಲಕ ಆಚರಿಸಿ ಗೌರವ ಸಲ್ಲಿಸುವ ವಾಡಿಕೆ ಗೂಗಲ್​ದ್ದು.

ಇಂದು ಕೂಡ ವಿಶ್ವ ಅಮ್ಮಂದಿರ ಸಲುವಾಗಿ ಎಲ್ಲಾ ಅಮ್ಮಂದಿರಿಗೆ ವಿಶೇಷ ಗೌರವ ಸಲ್ಲಿಸಿದೆ. ಬದುಕಿನ ಪ್ರತಿ ಹಂತದಲ್ಲಿಯೂ ದಾರಿತೋರುವ ನಿಮ್ಮ ನೆಚ್ಚಿನ ಅಮ್ಮನಿಗೆ ಲಾಕ್​ಡೌನ್​ ನಡುವೆ ಹೊರಗಡೆ ಹೋಗಿ ದುಬಾರಿ ಗಿಫ್ಟ್​ ತಂದುಕೊಡಲು ಸಾಧ್ಯವಾಗಿಲ್ಲ ಎಂಬ ಬೇಸರ ಬೇಡ, ಚಿಕ್ಕದಾಗಿ ಮನೆಯಲ್ಲಿಯೇ ಕೂತು ಆಕೆಗೊಂದು ವಿಶೇಷ ರೀತಿಯಲ್ಲಿ ಗ್ರೀಟಿಂಗ್​ ಕಾರ್ಡ್, ವರ್ಚುವಲ್​ ಕಾರ್ಡ್​​ ಮೂಲಕ ಧನ್ಯವಾದ ಅರ್ಪಿಸಿ ಎನ್ನುತ್ತಿದೆ ಗೂಗಲ್​.

ನೀವೇನೂ ಹೆಚ್ಚಿಗೆ ಮಾಡಬೇಕಾದದ್ದೇ ಇಲ್ಲ. ಗೂಗಲ್​ ಡಾಟ್​ ಕಾಮ್​ ಎಂದು ಟೈಪ್​ ಮಾಡಿದರೆ ಅಲ್ಲೇ ಎಲ್ಲವೂ ಸಿಕ್ಕಿಬಿಡುತ್ತದೆ. 'ಹ್ಯಾಪಿ ಮದರ್ಸ್ ಡೇ, ಇಂದಿನ ಗೂಗಲ್ ಡೂಡಲ್ ಮೂಲಕ ನಿಮ್ಮ ಅಮ್ಮನಿಗಾಗಿ ಹೃದಯಾಂತರಾಳದಿಂದ ಕಲೆ ಮತ್ತು ಕಸೂತಿ ತಯಾರಿಸಿ ಹಂಚಿಕೊಳ್ಳಿ' ಎಂಬ ಸಂದೇಶ ಬರುತ್ತದೆ. ಅದರ ಮೇಲೆ ಕ್ಲಿಕ್​ ಮಾಡಿದರೆ ಗೂಗಲ್ ಲೆಟರ್ ಎಂದು ತೋರಿಸುತ್ತದೆ. ಅಲ್ಲಿ ಕಾರ್ಡು ತಯಾರಿಸಲು ಆಯ್ಕೆ ಕೊಟ್ಟಿರುತ್ತಾರೆ. ಅಲ್ಲಿ ವಿನ್ಯಾಸ(ಡಿಸೈನ್)ಕ್ಕೆ ಕ್ಲಿಕ್ ಮಾಡಿ ಖಾಲಿ ಕಾರ್ಡನ್ನು ಇರಿಸಬಹುದು.

ನಿಮಗಾಗಿ ಬಗೆಬಗೆಯ ವಿನ್ಯಾಸಗಳ ಕ್ರಾಫ್ಟ್ ಐಕಾನ್ ಇರಿಸಲಾಗಿದೆ. ಅದನ್ನು ಆಯ್ಕೆ ಮಾಡಿಕೊಂಡು ನಿಮಗಿಷ್ಟವಾದ ಗ್ರೀಟಿಂಗ್​ ಕಾರ್ಡ್​ ತಯಾರಿಸಿಕೊಳ್ಳಬಹುದು. ಕಾರ್ಡು ಪೂರ್ಣಗೊಂಡ ನಂತರ ಸೆಂಡ್ (ಕಳುಹಿಸು) ಆಪ್ಷನ್​ ಬರುತ್ತದೆ. ಅಲ್ಲಿ ನಿಮ್ಮ ಅಮ್ಮನ ಫೋಟೋ ಅಪ್​ಲೋಡ್​ ಮಾಡಲೂ ಅವಕಾಶ ನೀಡಲಾಗಿದೆ. ಇದನ್ನು ನೀವು ಫೇಸ್​ಬುಕ್​, ವಾಟ್ಸ್​ಆ್ಯಪ್​, ಟ್ವಿಟರ್​ ಸೇರಿದಂತೆ ಎಲ್ಲ ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದಾಗಿದೆ.

ಬದುಕಿನುದ್ದಕ್ಕೂ ತನ್ನೆಲ್ಲ ನೋವುಗಳನ್ನು ಮರೆತು ಮಕ್ಕಳು, ಕುಟುಂಬಕ್ಕಾಗಿ ಜೀವನ ಮೀಸಲಿಡುವ ಅಮ್ಮನಿಗೊಂದು ಥ್ಯಾಂಕ್ಸ್​ ಹೇಳುವ ಸಂಬಂಧ ಅಮೆರಿಕದ ಅನ್ನಾ ಜಾರ್ವಿಸ್ 1914 ರಲ್ಲಿ ಅಮ್ಮನ ದಿನವನ್ನು ಆಚರಿಸುವ ಘೋಷಣೆ ಮಾಡಿದರು. ಪ್ರತಿ ವರ್ಷದ ಮೇ 2ನೇ ವಾರ ಈ ದಿನವನ್ನು ಆಚರಿಸಲಾಗುತ್ತದೆ. (ಏಜೆನ್ಸೀಸ್​)