ನ್ಯೂಸ್

ಮಾವಿನ ಹಣ್ಣಿನ ಜ್ಯೂಸ್​ನಲ್ಲಿ ವಿಷ ಬೆರೆಸಿ ತನ್ನ ಮಕ್ಕಳೊಂದಿಗೆ ಕುಡಿದ ತಾಯಿ!

ಬಾಗಲಕೋಟೆ: ಮಹಿಳೆಯೊಬ್ಬಳು ಮಾವಿನ ಹಣ್ಣಿನ ಜ್ಯೂಸ್​ನಲ್ಲಿ ಕ್ರಿಮಿನಾಶಕ ಬೆರೆಸಿ ತನ್ನ ಮೂರು ಹೆಣ್ಣು ಮಕ್ಕಳಿಗೆ ಕುಡಿಸಿ ಕೊಲೆ ಮಾಡಿದ್ದಲ್ಲದೆ ನಂತರ ತಾನೂ ವಿಷ ಸೇವಿಸಿ ಮೃತಪಟ್ಟಿದ್ದಾಳೆ.
ಈ ಘಟನೆ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ತಾಯಿ ರೇಖಾ ಬಗಲಿ(28) ಹಾಗೂ ಮಕ್ಕಳಾದ ಸನ್ನಿಧಿ(7), ಸಮೃದ್ದಿ(4), ಶ್ರೀನಿಧಿ(2) ಮೃತ ದುರ್ಧೈವಿಗಳು.

ಮೃತ ರೇಖಾ ಮಾಜಿ ಸಚಿವ ಎಚ್​​ವೈ ಮೇಟಿ ಅವರ ಸಹೋದರಿಯ ಕಡೆಯ ಸಂಬಂಧಿಕರು. ಇತ್ತೀಚೆಗೆ ರೇಖಾ ತನಗೆ ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಾನಸಿಕವಾಗಿ ಸ್ಥಿಮಿತಿ ಕಳೆದುಕೊಂಡಿದ್ದಳು. ಮಕ್ಕಳ‌ನ್ನು ಓದಿಸಿ, ಬೆಳೆಸುವುದು, ನಂತರ ಮದುವೆ ಮಾಡಬೇಕು ಎಂದೆಲ್ಲಾ ಚಿಂತಿಸಿ‌ ಮಾನಸಿಕವಾಗಿ ಬಳಲಿದ್ದಳು ಎನ್ನಲಾಗಿದೆ.

ಸದ್ಯ ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.