ಸಾಂದರ್ಭಿಕ ಚಿತ್ರ 
ನ್ಯೂಸ್

ಮಕ್ಕಳಿಬ್ಬರ ಪ್ರಾಣ ಉಳಿಸಿ ಸಾವಿಗೀಡಾದ ತಾಯಿ!; ಆಗಿದ್ದೇನು?

ತುಮಕೂರು: ಒಬ್ಬರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೋಗಿ ಇಬ್ಬರು-ಮೂವರೂ ಸಾವಿಗೀಡಾದ ಪ್ರಕರಣ ನಿನ್ನೆ ಹಾಗೂ ಮೊನ್ನೆ ನಡೆದಿದೆ. ಇಂದು ಕೂಡ ಅಂಥದ್ದೇ ಪ್ರಕರಣ ನಡೆದಿದ್ದರೂ ಇವತ್ತು ಮತ್ತೊಂದು ರೀತಿಯ ದುರಂತ ಸಂಭವಿಸಿದೆ.

ಶಿರಾ ತಾಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಈ ದುರಂತ ನಡೆದಿದೆ. ಮಕ್ಕಳಿಬ್ಬರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೋದ ತಾಯಿ, ಅವರಿಬ್ಬರನ್ನು ರಕ್ಷಿಸಿದರೂ ತಾವು ಸಾವಿಗೀಡಾಗಿದ್ದಾರೆ. ಮನು (30) ಸಾವಿಗೀಡಾದ ತಾಯಿ. ಇವರು ಬಟ್ಟೆ ಒಗೆಯಲೆಂದು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಕೆರೆ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿಗಿಳಿದು ಮುಳುಗಲಾರಂಭಿಸಿದ್ದನ್ನು ಗಮನಿಸಿದ ತಾಯಿ ಕೂಡಲೇ ರಕ್ಷಣೆಗೆ ಧಾವಿಸಿದ್ದಾರೆ. ಮಕ್ಕಳಿಬ್ಬರನ್ನು ರಕ್ಷಣೆ ಮಾಡಿದ ಈಕೆ ಈಜು ಬರದ ಕಾರಣಕ್ಕೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಮಕ್ಕಳಿಬ್ಬರಿಗೆ ಶಿರಾ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.