ತುಮಕೂರು: ಒಂದು ವರ್ಷದ ಹೆಣ್ಣು ಮಗುವನ್ನು ಹೆತ್ತತಾಯಿಯೇ ಕೊಯ್ದು ಕೊಂದಿದ್ದು, ಬಳಿಕ ಆಕೆಯೂ ಕತ್ತು ಕೊಯ್ದುಕೊಂಡಿದ್ದಾಳೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಇಂಥದ್ದೊಂದು ಘನಘೋರ ಘಟನೆ ನಡೆದಿದೆ.
ಮಧುಗಿರಿಯ ಡೂಮ್ಲೈಟ್ ವೃತ್ತದ ಬಳಿಯ ತಿಪ್ಪಾಪುರ ಛತ್ರದ ಹಿಂಭಾಗದ ನಿವಾಸಿ ಶಿವಾನಂದ ಎಂಬವರ ಪತ್ನಿ ಶ್ವೇತಾ (28) ಎಂಬಾಕೆಯೇ ಮಗಳನ್ನು ಕೊಲೆ ಮಾಡಿದ ತಾಯಿ. ಮನೆಯಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಹೆಣ್ಣು ಮಗುವಿನ ಕೈಯನ್ನು ಬ್ಲೇಡ್ನಿಂದ ಕೊಯ್ದಿದ್ದು, ತೀವ್ರ ರಕ್ತಸ್ರಾವಕ್ಕೀಡಾಗಿದೆ.
ಮಗುವಿನ ಕೈ ಕೊಯ್ದ ಬಳಿಕ ತಾಯಿ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ಗೊತ್ತಾಗಿ ಸ್ಥಳೀಯರು ಇಬ್ಬರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದರೂ ಮಗು ಅಷ್ಟರಲ್ಲಾಗಲೇ ಸಾವಿಗೀಡಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈಕೆ ಇತ್ತೀಚೆಗಷ್ಟೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದಳು ಎನ್ನಲಾಗಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಸರ್ಕಲ್ ಇನ್ಸ್ಪೆಕ್ಟರ್ ಹನುಮಂತರಾಯಪ್ಪ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧುಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.