ನ್ಯೂಸ್

ರಾತ್ರಿ ಆಟೋ ಓಡಿಸಿದ್ರೆ ಮಾತ್ರ ನೆಮ್ಮದಿ ಜೀವನ! ಕರುಳು ಕಿತ್ತು ಬರುತ್ತೆ ಈ ತಾಯಿಯ ಮಾತು ಕೇಳಿದ್ರೆ

ನವದೆಹಲಿ: ವಯಸ್ಸಾದ ಮೇಲೆ ತಂದೆ-ತಾಯಿ ತಮ್ಮ ಕೆಲಸಕ್ಕೆ ನಿವೃತ್ತಿ ಘೋಷಿಸಿ, ಮನೆಯಲ್ಲಿದ್ದು ವಿಶ್ರಾಂತಿಸುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಬಾಲ್ಯದಿಂದ ಮಕ್ಕಳ ಆರೈಕೆ ಮಾಡಿ, ಅವರನ್ನು ಓದಿಸಿ, ವಿದ್ಯಾವಂತರನ್ನಾಗಿ ಮಾಡಿದ ಬಳಿಕ ನಮ್ಮ ಕರ್ತವ್ಯ ಇಲ್ಲಿಗೆ ಮುಗಿತು ಎಂದು ಸುಮ್ಮನಾಗದ ಹೆತ್ತವರು, ಮಕ್ಕಳು ಕೆಲಸಕ್ಕೆ ಸೇರಿ ಅವರ ಖರ್ಚನ್ನು ಅವರೇ ನಿಭಾಯಿಸುವಷ್ಟು ಜವಾಬ್ದಾರಿ ಬರುವವರೆಗೂ ಉದ್ಯೋಗ ಮಾಡುತ, ಅವರ ಭವಿಷ್ಯ ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಾರೆ. ಚಿಕ್ಕ ವಯಸ್ಸಿನಿಂದ ನಮಗಾಗಿ ಹಗಲು-ರಾತ್ರಿ ಎಂದು ನೋಡದೆ ದುಡಿಯುವ ನಮ್ಮ ಪೋಷಕರು ನಮ್ಮ ಬೆಳವಣಿಗೆ ಚೆನ್ನಾಗಿರಲಿ ಎಂದು ಬಯಸುತ್ತಾರೆಯೇ ವಿನಃ ಬೇರೇನೂ ಅಲ್ಲ. ಜನ್ಮದಾತರ ತ್ಯಾಗ, ಶ್ರಮವನ್ನು ಗೌರವಿಸಿ ಅವರಿಗೆ ಮೂರೊತ್ತು ಊಟ ಹಾಕಲು ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಪ್ರೀತಿ ಕೊಟ್ಟು, ನೆಮ್ಮದಿಯಿಂದ ಉಳಿಸಿಕೊಳ್ಳಬೇಕು. ಆದ್ರೆ, ಹೆತ್ತವರ ಕಣ್ಣೀರಿಗೆ ಕಾರಣವಾಗುವ ಮಕ್ಕಳು ಇನ್ನೂ ಇದ್ದಾರೆ ಎಂಬುದೇ ದುಃಖಕರ ಸಂಗತಿ. ಅಂತಹದ್ದೇ ಒಂದು ಮನಕಲಕುವ ಘಟನೆ ಇದೀಗ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.

ಪ್ರತಿದಿನ ರಾತ್ರಿಯ ವೇಳೆ ಆಟೋ ಓಡಿಸುವ 55 ವರ್ಷ ವಯಸ್ಸಿನ ಮಹಿಳೆಯೊಬ್ಬರು, ತಮ್ಮ ಮನೆ ಹಾಗೂ ದೈನಂದಿನ ಖರ್ಚನ್ನು ಈ ಆಟೋ ಓಡಿಸಿ, ಅದರಿಂದ ಬಂದ ಹಣದಿಂದಲೇ ನಿಭಾಯಿಸುತ್ತಾರಂತೆ. ಇದಕ್ಕೆಲ್ಲಾ ಕಾರಣ ಅವರ ಪುತ್ರ. ರಾತ್ರಿ ಮನೆಗೆ ಬರುವ ಮಗ ವಿಪರೀತ ಜಗಳ ಮಾಡುತ್ತಾನೆ. ಇದರಿಂದ ಮನಸ್ಸಿಗೆ ಬಹಳ ನೋವುಂಟಾಗುತ್ತದೆ. ನಾನು ಮನೆಯಲ್ಲಿದ್ದರೆ ತಾನೇ ಆತ ಕಿತ್ತಾಡುವುದು ಎಂದು ರಾತ್ರಿ ಆಗುತ್ತಿದ್ದಂತೆ ಆಟೋ ಓಡಿಸುತ್ತೀನಿ. ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಹಿಂತಿರುಗಿ ನಿದ್ರಿಸುತ್ತೀನಿ ಎಂದು ಕಂಟೆಂಟ್​ ಕ್ರಿಯೇಟರ್​ ಆಯುಶ್​ ಗೋಸ್ವಾಮಿ ಅವರೊಂದಿಗೆ ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

"ಮಗನಿಂದ ಯಾವುದೇ ಸಹಾಯ, ಬೆಂಬಲವಿಲ್ಲ. ಪುತ್ರನನ್ನು ಬಿಟ್ಟರೆ ನನಗೆ ಯಾರು ಇಲ್ಲ. ನಮ್ಮಿಬ್ಬರ ಮಧ್ಯೆ ದಿನನಿತ್ಯ ಜಗಳವೇ ನಡೆದರೆ ಹೇಗೆ? ಬಹಳ ಹಿಂಸೆ ಆಗುತ್ತಿತ್ತು. ಪ್ರತಿದಿನ ಇದೇ ಹಿಂಸೆ ಅನುಭವಿಸಲು ಸಾಧ್ಯವಿಲ್ಲ. ಮನಸ್ಸಿಗೆ ನೆಮ್ಮದಿ ಬೇಕೆಂದು ಆಟೋ ಓಡಿಸುವ ಕಾಯಕ ರೂಡಿಸಿಕೊಂಡೆ. ಈ ಕೆಲಸದಿಂದ ನನ್ನ ಮನೆಯ ಖರ್ಚು ನಡೆಯುತ್ತಿದೆ. ಆರ್ಥಿಕವಾಗಿ ನನಗೆ ಸಹಾಯ ಮಾಡಬೇಕಿದ್ದ ಮಗನೇ ನನ್ನಿಂದ ನನ್ನ ಹಣವನ್ನು ಕಿತ್ತುಕೊಂಡು ಹೋದಾಗ ನಾನೇನು ಮಾಡಲಿ ನೀವೇ ಹೇಳಿ" ಎಂದು ತಾಯಿ ಭಾವುಕರಾಗಿದ್ದಾರೆ. ಇವರ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಮಹಿಳೆಯ ಪುತ್ರನಿಗೆ ಹಿಗ್ಗಾಮುಗ್ಗಾ ಜಾಡಿಸಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).