ನ್ಯೂಸ್

ಸಂಬಂಧಿಕರ ಮದುವೆ ಮುಗಿಸಿ ಮನೆಗೆ ಮರಳುವಾಗ ಮಾರ್ಗಮಧ್ಯೆ ತಾಯಿ, ಮಗಳು ಭೀಕರ ಸಾವು!

ತುಮಕೂರು‌: ಕ್ಯಾಂಟರ್​ ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ದುರಂತ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಈ ಘಟನೆ ನಡೆದಿದೆ. ತಾಯಿ ಶಾಂತಲಕ್ಷ್ಮಿ (30) ಹಾಗೂ ಮಗಳು ಚಿನ್ಮಯಿ (5) ಮೃತ ದುರ್ದೈವಿಗಳು. ಮೃತ ತಾಯಿ ಮತ್ತು ಮಗಳು ತುಮಕೂರು ನಗರದ ಕುಂಟಮ್ಮದ ತೋಟದ ನಿವಾಸಿಗಳು.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಭೀಮಸಂದ್ರದಲ್ಲಿ ಸಂಬಂಧಿಕರ ಮದುವೆ ಮುಗಿಸಿ ಆಟೋದಲ್ಲಿ ನಾಲ್ವರು ತುಮಕೂರು ನಗರಕ್ಕೆ ಬರುತ್ತಿದ್ದರು. ಈ ವೇಳೆ ತುಮಕೂರು ಕಡೆಯಿಂದ ಹೋಗ್ತಿದ್ದ ಕ್ಯಾಂಟರ್ ಲಾರಿಯ ಬ್ರೇಕ್ ಕಟ್ ಆಗಿ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಮತ್ತು ಮಗಳು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಮೃತ ಶಾಂತಲಕ್ಷ್ಮೀಯ ಪುತ್ರ ತನ್ಮಯ್ ಹಾಗೂ ಆಟೋ ಚಾಲಕ ಗಿರೀಶ್​ಗೆ ಗಂಭೀರ ಗಾಯವಾಗಿದೆ. ಗಾಯಾಳು ತನ್ಮಯ್​ಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋಚಾಲಕ ಗಿರೀಶ್​ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)