ಸಾಂದರ್ಭಿಕ ಚಿತ್ರ  
ನ್ಯೂಸ್

ಸೂಕ್ತ ರಸ್ತೆ ಇಲ್ಲ ಅಂತ ಆ್ಯಂಬುಲೆನ್ಸ್ ನಿಲ್ಲಿಸಿದ ಚಾಲಕ; ಮಗುವನ್ನು ಬೈಕಲ್ಲಿ ಕರೆದೊಯ್ದ ತಾಯಿ; ಆದ್ರೂ ಮಗು ಸಾವು

ತಮಿಳುನಾಡು: ಸರಿಯಾದ ರಸ್ತೆ ಇರದೆ ಆ್ಯಂಬುಲೆನ್ಸ್ ಅರ್ಧಕ್ಕೇ ನಿಂತ ಕಾರಣ ದಿಕ್ಕುತೋಚದ ತಾಯಿ, ಬಳಿಕ ಮಗುವನ್ನು 6 ಕಿ.ಮೀ. ದೂರ ಬೈಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದಾಗ್ಯೂ ಚಿಕಿತ್ಸೆ ವಿಳಂಬವಾದ್ದರಿಂದ ಮಗುವನ್ನು ಬದುಕಿಸಿಕೊಳ್ಳಲು ಆಗಲಿಲ್ಲ.

ತಮಿಳುನಾಡಿನ ವೆಲ್ಲೂರ್​ನ ಅಣ್ಣೈಕಟ್ಟು ಸಮೀಪ ಈ ಪ್ರಕರಣ ನಡೆದಿದೆ. ಮಹಿಳೆಯೊಬ್ಬರು ತನ್ನ 18 ತಿಂಗಳ ಮಗುವಿಗೆ ಹಾವು ಕಚ್ಚಿದ್ದರಿಂದ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಮುಂದೆ ಸರಿಯಾದ ರಸ್ತೆ ಇರದ್ದರಿಂದ ಆ್ಯಂಬುಲೆನ್ಸ್ ಚಾಲಕ ಮಾರ್ಗಮಧ್ಯೆಯೇ ನಿಲ್ಲಿಸಿದ್ದ. ನಂತರ ಈಕೆ ಬೈಕೊಂದರಲ್ಲಿ ಮಗುವನ್ನು 6 ಕಿ.ಮೀ. ದೂರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿದ್ದರಿಂದ ಚಿಕಿತ್ಸೆ ಫಲಿಸದೆ ಮಗು ಸಾವಿಗೀಡಾಗಿದೆ.

ಬೆಟ್ಟದ ಬುಡದಲ್ಲಿ ಮಿನಿ ಆ್ಯಂಬುಲೆನ್ಸ್ ಲಭ್ಯವಿತ್ತು, ಸಂಬಂಧಪಟ್ಟವರು ಆಶಾ ಕಾರ್ಯಕರ್ತರನ್ನು ಸಂಪರ್ಕಿಸಿದ್ದರೆ ಅವರು ಬಂದು ಪ್ರಥಮ ಚಿಕಿತ್ಸೆ ನೀಡಿ ನೆರವಾಗುತ್ತಿದ್ದರು. ಆದರೆ ಅವರು ಹಾಗೆ ಮಾಡದೆ ಮಗುವನ್ನು ಬೈಕ್​ನಲ್ಲಿ ಕರೆದೊಯ್ದರು ಎಂಬುದಾಗಿ ವೆಲ್ಲೂರ್ ಕಲೆಕ್ಟರ್​ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಸುಮಾರು 1,500 ಮಂದಿ ಇರುವ ಈ ಪ್ರದೇಶಕ್ಕೆ ರಸ್ತೆ ವ್ಯವಸ್ಥೆ ಸರಿಯಾಗಿಲ್ಲ. ಸೂಕ್ತ ರಸ್ತೆ ವ್ಯವಸ್ಥೆಗಾಗಿ ಅರಣ್ಯ ಇಲಾಖೆಯ ಅನುಮತಿಗಾಗಿ ಆನ್​ಲೈನ್ ಅರ್ಜಿ ಸಲ್ಲಿಸಲಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಅಣ್ಣೈಕಟ್ಟು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. -ಏಜೆನ್ಸೀಸ್