Morning Jogging Benefits: ಬೆಳಗಿನ ಜಾಗಿಂಗ್ ಅಥವಾ ಓಟ ಕೇವಲ ದೈಹಿಕ ಚಟುವಟಿಕೆಯಲ್ಲ, ಇದು ನಮ್ಮ ದೇಹದ ಆರೋಗ್ಯ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುವ ಉತ್ತಮ ಅಭ್ಯಾಸವಾಗಿದೆ. ನಿಯಮಿತವಾಗಿ ಓಡುವುದರಿಂದ ಜೀವಕೋಶಗಳ ಶಕ್ತಿ ಉತ್ಪಾದನೆ, ಹೃದಯದ ಸಾಮರ್ಥ್ಯ, ಮೂಳೆಗಳ ಬಲ ಹಾಗೂ ನೆನಪಿನ ಶಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಜಾಗಿಂಗ್ನಿಂದ ದೇಹ ಮತ್ತು ಮೆದುಳಿಗೆ ಸಿಗುವ ನಾಲ್ಕು ಪ್ರಮುಖ ವೈಜ್ಞಾನಿಕ ಪ್ರಯೋಜನಗಳು ಇಲ್ಲಿವೆ.
ನಮ್ಮ ದೇಹದ ಜೀವಕೋಶಗಳಲ್ಲಿರುವ ಮೈಟೋಕಾಂಡ್ರಿಯಾಗಳು ಆಹಾರದಿಂದ ಶಕ್ತಿಯನ್ನು ಉತ್ಪಾದಿಸುವ ಪ್ರಮುಖ ಅಂಗಗಳಾಗಿವೆ. ಇವುಗಳನ್ನು ಜೀವಕೋಶದ ಶಕ್ತಿ ಕೇಂದ್ರಗಳು ಎಂದೇ ಕರೆಯಲಾಗುತ್ತದೆ. ನಿಯಮಿತವಾಗಿ ಜಾಗಿಂಗ್ ಮಾಡುವುದರಿಂದ ಜೀವಕೋಶಗಳಲ್ಲಿ ಹೊಸ ಮೈಟೋಕಾಂಡ್ರಿಯಾಗಳು ಉತ್ಪತ್ತಿಯಾಗುವ ಪ್ರಕ್ರಿಯೆ ಉತ್ತೇಜನಗೊಳ್ಳುತ್ತದೆ. ಇದನ್ನು ಮೈಟೋಕಾಂಡ್ರಿಯಲ್ ಬಯೋಜೆನೆಸಿಸ್ (Mitochondrial Biogenesis) ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯಿಂದ ದೇಹದ ಶಕ್ತಿ ಉತ್ಪಾದನಾ ಸಾಮರ್ಥ್ಯ ಸುಧಾರಿಸಲು, ದೈಹಿಕ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಹಾಗೂ ಸಹಿಷ್ಣುತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
VO2 ಮ್ಯಾಕ್ಸ್ (VO2 Max) ಎಂದರೆ ವ್ಯಾಯಾಮ ಮಾಡುವಾಗ ನಮ್ಮ ದೇಹ ಎಷ್ಟು ಪ್ರಮಾಣದ ಆಮ್ಲಜನಕವನ್ನು ಬಳಸಿಕೊಳ್ಳಬಲ್ಲದು ಎಂಬುದನ್ನು ಅಳೆಯುವ ಮಾನದಂಡ. ನಿಯಮಿತವಾಗಿ ಓಡುವುದರಿಂದ ಹೃದಯ ಮತ್ತು ಶ್ವಾಸಕೋಶಗಳು ಉತ್ತಮವಾಗಿ ಕೆಲಸ ಮಾಡುತ್ತವೆ. ಇದರಿಂದ ಸ್ನಾಯುಗಳಿಗೆ ಹೆಚ್ಚು ಆಮ್ಲಜನಕ ಸಿಗುತ್ತದೆ. ಪರಿಣಾಮವಾಗಿ ದೇಹದ ಶಕ್ತಿ ಮತ್ತು ಸಹಿಷ್ಣುತೆ ಹೆಚ್ಚಾಗಿ, ಹೆಚ್ಚು ಹೊತ್ತು ಆಯಾಸವಿಲ್ಲದೆ ಕೆಲಸ ಮಾಡಲು ಸಹಾಯವಾಗುತ್ತದೆ.
ಜಾಗಿಂಗ್ ಒಂದು ತೂಕ ಹೊರುವ ವ್ಯಾಯಾಮವಾಗಿದ್ದು, ಓಡುವಾಗ ಮೂಳೆಗಳ ಮೇಲೆ ಬೀಳುವ ಸಹಜ ಒತ್ತಡವು ಅವುಗಳ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಒತ್ತಡವು ಮೂಳೆ ನಿರ್ಮಾಣಕ್ಕೆ ಸಂಬಂಧಿಸಿದ ಆಸ್ಟಿಯೋಬ್ಲಾಸ್ಟ್ (Osteoblast) ಕೋಶಗಳ ಚಟುವಟಿಕೆಯನ್ನು ಉತ್ತೇಜಿಸಬಹುದು. ನಿಯಮಿತ ದೈಹಿಕ ಚಟುವಟಿಕೆ ಮೂಳೆಗಳ ಆರೋಗ್ಯಕ್ಕೆ ಪೂರಕವಾಗಿದ್ದು, ವಯಸ್ಸಾದಂತೆ ಮೂಳೆ ಸಾಂದ್ರತೆ ಕಡಿಮೆಯಾಗುವ ಅಪಾಯವನ್ನು ತಗ್ಗಿಸಲು ನೆರವಾಗಬಹುದು. ಆಸ್ಟಿಯೋಪೊರೋಸಿಸ್ನಂತಹ ಮೂಳೆ ಸಂಬಂಧಿತ ಸಮಸ್ಯೆಗಳ ತಡೆಗಟ್ಟುವಿಕೆಯಲ್ಲಿ ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ.
ಜಾಗಿಂಗ್ನಿಂದ ಮೆದುಳಿನ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ. ವ್ಯಾಯಾಮದ ಸಮಯದಲ್ಲಿ BDNF (Brain-Derived Neurotrophic Factor) ಎಂಬ ಪ್ರೋಟೀನ್ನ ಚಟುವಟಿಕೆ ಹೆಚ್ಚಾಗಬಹುದು. ಇದು ನರಕೋಶಗಳ ಬೆಳವಣಿಗೆ, ಅವುಗಳ ನಡುವಿನ ಸಂಪರ್ಕ ಹಾಗೂ ಮೆದುಳಿನ ಕಾರ್ಯಕ್ಷಮತೆಗೆ ಸಹಾಯ ಮಾಡುತ್ತದೆ. ನೆನಪಿನ ಶಕ್ತಿಗೆ ಪ್ರಮುಖವಾಗಿರುವ ಹಿಪೊಕ್ಯಾಂಪಸ್ (Hippocampus) ಭಾಗದ ಕಾರ್ಯಕ್ಕೂ ವ್ಯಾಯಾಮ ಪೂರಕವಾಗಿದೆ. ಇದರಿಂದ ಕಲಿಕೆ, ಏಕಾಗ್ರತೆ ಮತ್ತು ನೆನಪಿನ ಸಾಮರ್ಥ್ಯ ಉತ್ತಮವಾಗಲು ನೆರವಾಗಬಹುದು.
ಜಾಗಿಂಗ್ನ ಈ ಪ್ರಯೋಜನಗಳು ಒಂದೇ ದಿನದಲ್ಲಿ ಸಿಗುವುದಿಲ್ಲ. ನಿಯಮಿತವಾಗಿ, ದೇಹಕ್ಕೆ ಹೊಂದುವ ರೀತಿಯಲ್ಲಿ ದೈಹಿಕ ಚಟುವಟಿಕೆ ನಡೆಸಿದಾಗ ಕಾಲಕ್ರಮೇಣ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ಆರಂಭದಲ್ಲಿ ಆರಾಮದಾಯಕ ವೇಗದಲ್ಲಿ ನಡೆಯುವುದು ಅಥವಾ ಲಘು ಜಾಗಿಂಗ್ ಮಾಡುವುದು ಉತ್ತಮ. ಮಂಡಿ ಅಥವಾ ಕೀಲು ಸಮಸ್ಯೆ, ಹೃದಯ ಸಂಬಂಧಿ ತೊಂದರೆಗಳಿದ್ದವರು ಓಟವನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಬೆಳಗಿನ ಜಾಗಿಂಗ್ ದೇಹದ ಆರೋಗ್ಯದ ಜತೆಗೆ ಮೆದುಳಿನ ಚಟುವಟಿಕೆಗೂ ನೆರವಾಗುವ ಸರಳ ಅಭ್ಯಾಸವಾಗಿದ್ದು, ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಇದನ್ನು ರೂಢಿಸಿಕೊಳ್ಳಬಹುದು.