ನ್ಯೂಸ್

ವಾರದಲ್ಲಿ 70ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ

ನವದೆಹಲಿ: ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬರುವ ಕಳವಳಕಾರಿ ವಿದ್ಯಮಾನ ಮುಂದುವರಿದಿದ್ದು ಶನಿವಾರ ಒಂದೇ ದಿನ ನಾನಾ ವಿಮಾನಯಾನ ಸಂಸ್ಥೆಗಳ 30ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆಯನ್ನು ಎದುರಿಸಿದವು.

ಈ ಹುಸಿ ಕರೆಗಳಿಂದಾಗಿ ಸಂಚಾರದಲ್ಲಿ ವ್ಯತ್ಯಯವಾಯಿತು. ಶನಿವಾರದ ಪ್ರಕರಣ ನಂತರ ವಾರದಲ್ಲಿ ದಾಖಲಾದ ಇಂಥ ಪ್ರಕರಣಗಳ ಸಂಖ್ಯೆ 70ಕ್ಕೆ ಏರಿದಂತಾಗಿದೆ. ಬಾಂಬ್ ಬೆದರಿಕೆ ಕರೆಗಳ ಕಾರಣದಿಂದ ಭದ್ರತಾ ವ್ಯವಸ್ಥೆ ವಿಚಾರದಲ್ಲಿ ಕಳವಳ ಉಂಟಾಗಿದೆ. ದೇಶೀಯ ಏರ್​ಲೈನ್ಸ್​ಗಳ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳ 30ಕ್ಕೂ ಅಧಿಕ ವಿಮಾನಗಳಿಗೆ ಶನಿವಾರ ಬಾಂಬ್ ಬೆದರಿಕೆ ಎದುರಾಯಿತು ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಿಗ್ಗೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕರೆಗಳು ಹರಿದು ಬಂದವು. ಕನಿಷ್ಠ ಒಂದು ವಿಮಾನದ ಶೌಚಗೃಹದಲ್ಲಿ ಒಂದು ನೋಟ್ ಸಿಕ್ಕಿದ್ದು ವಿಮಾನದಲ್ಲಿ ಬಾಂಬ್ ಇದೆ ಎಂದು ಅದರಲ್ಲಿ ಬರೆಯಲಾಗಿತ್ತು.

ಶುಕ್ರವಾರ, ದೆಹಲಿಯಿಂದ ಲಂಡನ್​ಗೆ ತೆರಳುತ್ತಿದ್ದ ವಿಸ್ತಾರಾ ವಿಮಾನಕ್ಕೆ ಸ್ಫೋಟ ಬೆದರಿಕೆ ಬಂದ ಕಾರಣ ಅದನ್ನು ಜರ್ಮನಿಯ ಫ್ರಾಂಕ್​ಫರ್ಟ್​ಗೆ ಡೈವರ್ಟ್ ಮಾಡಲಾಗಿತ್ತು. ನಂತರ ಅದು ಲಂಡನ್​ಗೆ ಹೊರಟಿತು. ದುಬೈ-ಜೈಪುರ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ, ಬಾಂಬ್ ಬೆದರಿಕೆಯಿಂದಾಗಿ ವಿಳಂಬವಾಗಿ ಹೊರಟಿತು. ಜೈಪುರದಿಂದ ಬೆಳಿಗ್ಗೆ 6.10ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನ, ಸಮಗ್ರ ಭದ್ರತಾ ಪರಿಶೀಲನೆ ನಂತರ ಬೆಳಿಗ್ಗೆ 7.45ಕ್ಕೆ ದುಬೈಗೆ ಹೊರಟಿತು.

ಬೆಂಗಳೂರು - ಮುಂಬೈ ವಿಮಾನ: ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ತೆರಳಲಿದ್ದ ಆಕಾಶ ಏರ್​ನ ವಿಮಾನ ಹೊರಡುವ ಸ್ವಲ್ಪವೇ ಹೊತ್ತಿಗೆ ಬೆದರಿಕೆ ಕರೆ ಬಂದಿದ್ದರಿಂದ ಸಮಗ್ರವಾಗಿ ಪರಿಶೀಲಿಸಿದಾಗ ಯಾವುದೇ ಆಕ್ಷೇಪಾರ್ಹ ವಸ್ತುಗಳು ಕಂಡುಬಾರದ್ದರಿಂದ ಎನ್​ಒಸಿ ನೀಡಲಾಯಿತು. ಹಲವು ಗಂಟೆ ವಿಳಂಬದ ನಂತರ ವಿಮಾನ ಮುಂಬೈಗೆ ತೆರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಕರೆಗೆ ₹3 ಕೋಟಿ ನಷ್ಟ: ವಿಮಾನಗಳಿಗೆ ಬರುವ ಹುಸಿ ಬಾಂಬ್ ಕರೆಗಳು ಕೇವಲ ಭದ್ರತಾ ಕಳವಳದ ವಿಷಯವಾಗಿ ಉಳಿದಿಲ್ಲ. ಅವು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿಯೂ ಪರಿಣಮಿಸುತ್ತವೆ. ವಿಮಾನಗಳಿಗೆ ಬರುವ ಇಂಥ ಪ್ರತಿ ಕರೆಯಿಂದಾಗಿ ಸಂಬಂಧಪಟ್ಟ ಏರ್​ಲೈನ್ಸ್​ಗಳಿಗೆ ಸರಾಸರಿ ಸುಮಾರು 3 ಕೋಟಿ ರೂ.ನಷ್ಟ ಸಂಭವಿಸುತ್ತದೆ.

ನಿಯಮ ಪಾಲನೆ: ಅಕ್ಟೋಬರ್ 19ರಂದು ಕಾರ್ಯಾಚರಿಸುತ್ತಿದ್ದ ನಮ್ಮ ಕೆಲವು ವಿಮಾನ ಗಳಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಆಕಾಶ ಏರ್ ಅಧಿಕಾರಿಗಳು ತಿಳಿಸಿದ್ದಾರೆ. ಸುರಕ್ಷತೆ ಮತ್ತು ಭದ್ರತೆ ನಿಯಮಗಳ ಅನ್ವಯ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ಅಗತ್ಯ ಕ್ರಮ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.

ಎಷ್ಟು ಬೆದರಿಕೆ ಕರೆಗಳು?

  • ಒಂದು ವಾರದಲ್ಲಿ 70ಕ್ಕೂ ಹೆಚ್ಚು
  • ಶನಿವಾರ ಒಂದೇ ದಿನ 30ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ
  • 500ಕ್ಕೂ ಹೆಚ್ಚು ವಿಮಾನ ಸಂಚಾರದಲ್ಲಿ ವ್ಯತ್ಯಯ

ಕೈಗೊಂಡ ಭದ್ರತಾ ಕ್ರಮ

  • ಬೆದರಿಕೆ ಬಂದ ವಿಮಾನಗಳನ್ನು ಪ್ರತ್ಯೇಕಿಸಿ, ತಪಾಸಣೆ
  • ಪ್ರಯಾಣಿಕರು ಸುರಕ್ಷಿತ ಸ್ಥಳಕ್ಕೆ ರವಾನೆ
  • ಭದ್ರತಾ ಏಜೆನ್ಸಿಗಳಿಂದ ಹೈಅಲರ್ಟ್
  • ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಪರಿಶೀಲನೆಗೆ ಕ್ರಮ

ಯಾವ್ಯಾವ ಏರ್​ಲೈನ್ಸ್?

  • ವಿಸ್ತಾರಾ
  • ಏರ್ ಇಂಡಿಯಾ
  • ಇಂಡಿಗೋ
  • ಆಕಾಶ ಏರ್
  • ಸ್ಪೈಸ್ ಜೆಟ್
  • ಸ್ಟಾರ್ ಏರ್
  • ಅಲಯನ್ಸ್ ಏರ್