ನ್ಯೂಸ್

ಸಂಪಾದಕೀಯ| ಇನ್ನಷ್ಟು ಕಟ್ಟೆಚ್ಚರ ಅವಶ್ಯ; ಲೋಪಗಳು ನಿವಾರಿಸಬೇಕು

Webdesk - Manjunatha B

ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಸದನದೊಳಗೆ ಹಾರಿದ ಘಟನೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ ನಡೆದು 22 ವರ್ಷಗಳಾದ ದಿನದಂದೇ (ಡಿಸೆಂಬರ್ 13) ಈ ಘಟನೆ ಸಂಭವಿಸಿರುವುದರಿಂದ ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ. ಐದು ಹಂತದ ತಪಾಸಣಾ ವ್ಯವಸ್ಥೆ ಪೂರ್ಣಗೊಂಡ ನಂತರವೇ ಪ್ರೇಕ್ಷಕರ ಗ್ಯಾಲರಿ ಪ್ರವೇಶಿಸಲು ಸಾಧ್ಯ. ಹೀಗಿರುವಾಗ ಇಬ್ಬರು ವ್ಯಕ್ತಿಗಳು ಲೋಕಸಭೆ ಕಲಾಪದ ವೇಳೆಯೇ ಒಳನುಗ್ಗಿರುವುದು ಭದ್ರತಾ ವ್ಯವಸ್ಥೆಯ ದೊಡ್ಡ ಲೋಪವೇ ಹೌದು. ತೀವ್ರ ಕಟ್ಟೆಚ್ಚರದ ನಡುವೆಯೂ ನಿರ್ಲಕ್ಷ್ಯ ವಹಿಸಿದ್ದು ಸರಿಯಲ್ಲ. ಖಲಿಸ್ತಾನಿ ಭಯೋತ್ಪಾದಕನಿಂದ ಸಂಸತ್ ಮೇಲೆ ದಾಳಿ ನಡೆಸುವ ಬೆದರಿಕೆಯೂ ಇತ್ತು. ಹೀಗಿರುವಾಗ ಇಡೀ ಸುರಕ್ಷಾ ವ್ಯವಸ್ಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ದೇಶದ ಲೋಕಸಭೆಯೇ ಸುರಕ್ಷಿತವಾಗಿಲ್ಲ ಎಂದಾದರೆ ಜನನಿಬಿಡ ಸಾರ್ವಜನಿಕ ಸ್ಥಳಗಳನ್ನು ರಕ್ಷಿಸುವವರಾರು? ಇಲ್ಲಿ ಕಣ್ಗಾವಲು ಇಡುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.

ಬಿಗಿ ಪೊಲೀಸ್ ಬಂದೋಬಸ್ತ್, ಭಾರಿ ಶಿಷ್ಟಾಚಾರದ ಭದ್ರತಾ ವ್ಯವಸ್ಥೆಯ ನಡುವೆ ಇರುವ ಸಣ್ಣ ಲೋಪಗಳನ್ನೇ ದುರುಪಯೋಗ ಪಡಿಸಿಕೊಂಡು ಸಮಾಜಘಾತಕ ಶಕ್ತಿಗಳು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಪ್ರಧಾನಿ ಪ್ರವಾಸದ ವೇಳೆಯೂ ಇಂಥ ಕೆಲ ಘಟನೆಗಳು ಸಂಭವಿಸಿವೆ. ಇವು ಆತಂಕ ಮೂಡಿಸುವ ಪ್ರಯತ್ನಗಳೇ ಆಗಿವೆ. ಹಾಗಾಗಿ, ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಪರಿಹಾರದ ಕ್ರಮಗಳನ್ನು ಶೋಧಿಸಬೇಕಿದೆ.

ದೇಶದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆಗ ಎಲ್ಲ ಕಡೆ ಬಹಿರಂಗ ರ್ಯಾಲಿಗಳು, ರೋಡ್ ಷೋಗಳದ್ದೇ ಅಬ್ಬರ. ಸಾವಿರಾರು ಜನರು ಒಂದೆಡೆ ಸೇರುತ್ತಾರೆ. ವಿಧ್ವಂಸಕ ಶಕ್ತಿಗಳು ಇಂಥ ಸಂದರ್ಭಗಳನ್ನು ಗುರಿಯಾಗಿಸಿಕೊಳ್ಳದಂತೆ ಪೂರ್ಣ ಎಚ್ಚರ ವಹಿಸಬೇಕಿದೆ. ಅಲ್ಲದೆ, ಈಗ ದೇಶದ ಬಹುತೇಕ ಕಡೆ ಬೃಹತ್ ಜಾತ್ರೆಗಳು ನಡೆಯುತ್ತಿವೆ. ಇಲ್ಲಿ ಕೂಡ ಅಪಾರ ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ. ಆದರೆ, ಇತ್ತೀಚಿನ ಘಟನೆಗಳನ್ನು ಅವಲೋಕಿಸಿದಾಗ ಆಂತರಿಕ ಭದ್ರತೆಗೆ ಹಲವು ಸವಾಲುಗಳು ಎದುರಾಗಿರುವುದು ಕಹಿಸತ್ಯ. ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಾನೂನು ಸುವ್ಯವಸ್ಥೆ ಕಾಪಾಡುವುದನ್ನೇ ಮೊದಲ ಆದ್ಯತೆಯಾಗಿಸಿಕೊಳ್ಳಬೇಕು. ಜನರು ಭೀತಿಯ ವಾತಾವರಣದಲ್ಲಿ ಬದುಕುವಂತಾಗಬಾರದು.

ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಬಿಗಿ ತಪಾಸಣೆಯ ವ್ಯವಸ್ಥೆ ಇರುವಂತೆ ಇತರೆಡೆಯಲ್ಲಿಯೂ ಅದನ್ನು ವಿಸ್ತರಿಸಬೇಕು. ಈ ಬಗ್ಗೆ ಕಠಿಣ ಕ್ರಮ ಕೈಗೊಂಡು, ಆಂತರಿಕ ಭದ್ರತೆಗೆ ಪ್ರಾಶಸ್ಱ ನೀಡುವುದು ಅನಿವಾರ್ಯ.