ನ್ಯೂಸ್

ತೂಗುಸೇತುವೆ ಕುಸಿದು ಘೋರ ದುರಂತ: 132ಕ್ಕೇರಿದ ಸಾವಿನ ಸಂಖ್ಯೆ, ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ...

ಅಹಮದಾಬಾದ್​: ಗುಜರಾತ್​ನ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗುಸೇತುವೆ ಕುಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿದ್ದು, ಕ್ಷಣಕ್ಷಣಕ್ಕೂ ಆತಂಕ ಮಡುಗಟ್ಟಿದೆ. ಸೇತುವೆ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನೂ ನೂರಾರು ಜನ ನಾಪತ್ತೆಯಾಗಿದ್ದು, ಎನ್​ಡಿಆರ್​ಎಫ್​​ ತಂಡ, ಸೇನಾಪಡೆ, ವಾಯುಪಡೆ, ನೌಕಾಪಡೆ, ಅಗ್ನಿಶಾಮಕ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಶವಗಳು ಸಿಗುತ್ತಲೇ ಇವೆ. ತೂಗುಸೇತುವೆ ಮೇಲೆ ಛತ್​ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ನದಿ ತೀರದಲ್ಲಿ ಸಾವಿರಾರು ಮಂದು ಭಾನುವಾರ ಜಮಾಯಿಸಿದ್ದರು. ಸಂಜೆ 6.30ರಲ್ಲಿ ಪ್ರವಾಸಿಗರು ಸೇರಿ 500ಕ್ಕೂ ಅಧಿಕ ಮಂದಿ ಸೇತುವೆ ಮೇಲೆ ನಿಂತಿದ್ದರು. ಆ ವೇಳೆ ಸೇತುವೆ ಕುಸಿದಿದೆ. ಈ ದುರಂತ ಇಡೀ ಗುಜರಾತ್​ ಬೆಚ್ಚಿಬಿದ್ದಿದೆ. ಇನ್ನು ಸ್ಥಳೀಯರೂ ಇಡೀ ರಾತ್ರಿ ನಿದ್ರೆ ಮಾಡದೆ ಸ್ಥಳದಲ್ಲೇ ಇದ್ದು ರಕ್ಷಣಾ ಕಾಯಾಚರಣೆಗೆ ಸಹಕರಿಸಿದ್ದಾರೆ.

ಈ ದುರಂತದ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಹಲವು ಮಕ್ಕಳೂ ಸತ್ತಿದ್ದಾರೆ. ಮೃತದೇಹಗಳನ್ನು ಸಾಗಿಸಲು ನಾನು ನನ್ನ ಸ್ವಂತ ವಾಹನವನ್ನೇ ಕೊಟ್ಟೆ. ಇಂತಹ ದುರ್ಘಟನೆಯನ್ನು ನಾನು ಎಂದೂ ನೋಡಿಲ್ಲ.. ಎನ್ನುತ್ತಲೇ ಪ್ರತ್ಯಕ್ಷದಶಿ ಹಸೀನಾ ಕಂಬನಿ ಮಿಡಿದರು.

ತೂಗು ಸೇತುವೆ ಬಳಿ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ. ನಾನು ನಾನು ಪ್ರತಿ ಭಾನುವಾರ ಅಲ್ಲಿ ಟೀ ಮಾರುತ್ತೇನೆ. ನೋಡನೋಡುತ್ತಿದ್ದಂತೆ ಸೇತುವೆ ಕುಸಿದು ಬಿತ್ತು. ಸುಮಾರು 8 ತಿಂಗಳ ಗರ್ಭಿಣಿಯೊಬ್ಬರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಂತಹ ಹೃದಯ ವಿದ್ರಾವಕ ದುರ್ಘಟನೆ ನೋಡಿ ರಾತ್ರಿ ಇಡೀ ನಿದ್ರೆಯೇ ಬರಲಿಲ್ಲ. ಸ್ಥಳದಲ್ಲೇ ಇದ್ದು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದೆ, ಶವಗಳನ್ನು ಸಾಗಿಸಲು ಹೆಗಲು ಕೊಟ್ಟೆ... ಇಂತಹ ದುರಂತವನ್ನ ನಾನು ನನ್ನ ಜೀವನದಲ್ಲಿ ನೋಡಿಯೇ ಇರಲಿಲ್ಲ... ನನ್ನ ಕಣ್ಣೆದುರೇ ಅರೆಕ್ಷಣದಲ್ಲಿ ಎಲ್ಲರ ಬದುಕು ಸರ್ವನಾಶವಾಯ್ತು... ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ಇನ್ನು ಬಿಜೆಪಿ- ಕಾಂಗ್ರೆಸ್​ ಎರಡೂ ಪಕ್ಷಗಳೂ ಗುಜರಾತ್​ನಲ್ಲಿ ಇಂದು ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ಮುಂದೂಡಿವೆ. ಇಂದು ನಡೆಯಬೇಕಿದ್ದ ಕಾಂಗ್ರೆಸ್​ನ​ 'ಪರಿವರ್ತನಾ ಯಾತ್ರೆ', ಪ್ರಧಾನಿ ನರೇಂದ್ರ ಮೋದಿ ಅವರ ರೋಡ್​ ಶೋ ಕಾರ್ಯಕ್ರಮ ರದ್ದಾಗಿದೆ.