ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಪ್ರಯಾಣಿಕ ವಾಹನಗಳ ಸಂಚಾರದ ಪ್ರಮಾಣ ಶೇ. 26ರಷ್ಟು ಮಾತ್ರ ಇದ್ದು, ಅವುಗಳಿಗೆ ಟೋಲ್ ಸಂಗ್ರಹದ ಬದಲು ಮಾಸಿಕ ಮತ್ತು ವಾರ್ಷಿಕ ಪಾಸ್ಗಳನ್ನು ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಟೋಲ್ಗಳಲ್ಲಿ ಒಟ್ಟು ಆದಾಯದ ಶೇ. 74ರಷ್ಟು ಹಣವು ವಾಣಿಜ್ಯ ವಾಹನಗಳಿಂದ ಬರುತ್ತದೆ. ಖಾಸಗಿ ವಾಹನಗಳಿಂದ ಶೇ. 26ರಷ್ಟು ಆದಾಯ ಬರುತ್ತಿದೆ. ಆದ್ದರಿಂದ ಅವುಗಳಿಗೆ ಮಾಸಿಕ ಅಥವಾ ವಾರ್ಷಿಕ ಪಾಸುಗಳನ್ನು ನೀಡಿದರೆ ಜನರಿಗೂ ಅನುಕೂಲವಾಗುತ್ತದೆ, ಸರ್ಕಾರಕ್ಕೂ ಯಾವುದೇ ನಷ್ಟ ಆಗುವುದಿಲ್ಲ’ ಎಂದು ವಿವರಿಸಿದರು.
‘ಫಾಸ್ಟ್ಯಾಗ್ ಜತೆಗೆ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈಗಿನ ಟೋಲ್ ಸಂಗ್ರಹ ವ್ಯವಸ್ಥೆಗಿಂತ ಅದು ಉತ್ತಮ. ಇದಲ್ಲದೆ, ಗ್ರಾಮಸ್ಥರ ಸಂಚಾರಕ್ಕೆ ಅಡೆತಡೆಯಾಗದಂತೆ ಮಾಡುವ ದೃಷ್ಟಿಯಿಂದ ಟೋಲ್ ಸಂಗ್ರಹದ ಬೂತ್ಗಳನ್ನು ಗ್ರಾಮಗಳ ಹೊರಗೆ ಸ್ಥಾಪಿಸಲಾಗುವುದು’ ಎಂದು ಗಡ್ಕರಿ ಹೇಳಿದರು.
ಪ್ರಾರಂಭಿಕ ಹಂತದಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮತ್ತು ಹರಿಯಾಣದ ಪಾಣಿಪತ್-ಹಿಸಾರ್ ವಲಯದಲ್ಲಿ ಮಾಡಲು ಅಧ್ಯಯನ ಕೈಗೊಳ್ಳಲಾಗುವುದು ಎಂದು ಕಳೆದ ಜುಲೈನಲ್ಲಿ ಗಡ್ಕರಿ ತಿಳಿಸಿದ್ದರು.
ಟೋಲ್ಗಳಲ್ಲಿ ಸಂಚಾರ ದಟ್ಟಣೆಯನ್ನು ತಡೆಯುವುದು ಇದರ ಉದ್ದೇಶವಾಗಿದೆಯಲ್ಲದೆ ವಾಹನಗಳು ಕ್ರಮಿಸಿದ ನಿರ್ದಿಷ್ಟ ಅಂತರಕ್ಕೆ ಟೋಲ್ ವಸೂಲಿ ಮಾಡಲು ಸಾಧ್ಯವಾಗುತ್ತದೆ. 2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸರಾಸರಿ ಕಾಯುವ ಸಮಯ 8 ನಿಮಿಷ ಇತ್ತು. 2021ರಲ್ಲಿ ಫಾಸ್ಟ್ಯಾಗ್ ಜಾರಿಗೆ ಬಂದ ಬಳಿಕ ಇದು 47 ಸೆಕೆಂಡ್ಗೆ ಇಳಿಯಿತು. ಈ ವಿಷಯದಲ್ಲಿ ಗಣನೀಯ ಸುಧಾರಣೆ ಆಗಿದೆಯಾದರೂ ನಗರಗಳ ಬಳಿ, ದಟ್ಟಣೆ ಹೆಚ್ಚಾಗಿರುವ ಪಟ್ಟಣಗಳ ಹತ್ತಿರ ಈಗಲೂ ಪೀಕ್ ಅವರ್ಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯುವ ಅನಿವಾರ್ಯತೆ ಇದೆ.
ಇಥೆನಾಲ್ ಮಿಶ್ರಣ 2 ತಿಂಗಳಲ್ಲಿ ಗುರಿ ಸಾಧನೆ: ಶೇ. 20ರಷ್ಟು ಇಥೆನಾಲ್ ಮಿಶ್ರಣದ ಗುರಿಯನ್ನು ಭಾರತ ಇನ್ನೆರಡು ತಿಂಗಳಲ್ಲಿ ಮುಟ್ಟಲಿದೆ ಎಂದು ಗಡ್ಕರಿ ಹೇಳಿದರು.
ಪೆಟ್ರೋಲ್ ಜತೆ ಇಥೆನಾಲ್ ಮಿಶ್ರಣ ಮಾಡುವ ಪದ್ಧತಿಯು ಪ್ರಾಯೋಗಿಕವಾಗಿ 2001ರಲ್ಲಿ ಪ್ರಾರಂಭವಾಯಿತು. ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಟಾಟಾ ಮೋಟರ್ಸ್, ಮಹಿಂದ್ರಾ ಆಂಡ್ ಮಹಿಂದ್ರಾ, ಮಾರುತಿ ಸುಜುಕಿ, ಹ್ಯುಂಡೈ ಮೋಟರ್ಸ್ ಈಗಾಗಲೇ ನೂರಕ್ಕೆ ನೂರರಷ್ಟು ಬಯೋ ಇಥೆನಾಲ್ ಆಧರಿಸಿ ಚಲಿಸುವ ವಾಹನಗಳ ಉತ್ಪಾದನೆಯನ್ನು ಆರಂಭಿಸಿವೆ ಎಂದು ಹೇಳಿದರು.
ಜಗತ್ತಿನ ಅತ್ಯಂತ ಮಲಿನವಾದ 50 ನಗರಗಳ ಪೈಕಿ 42 ನಗರಗಳು ಭಾರತದಲ್ಲೇ ಇವೆ. 22 ಲಕ್ಷ ಕೋಟಿ ರೂ. ಬೆಲೆಯ ಪಳೆಯುಳಿಕೆ ಇಂಧನಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದಲೂ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ವಿವರಿಸಿದರು.
ಪೆಟ್ರೋಲ್ನಲ್ಲಿ ಶೇ. 20ರಷ್ಟು ಅಧಿಕ ಇಥೆನಾಲ್ ಮಿಶ್ರಣ ಮಾಡುವ ಯೋಜನೆಗೆ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ 15 ನಗರಗಳಲ್ಲಿ ಇದನ್ನು ಜಾರಿ ಮಾಡಲಾಗಿತ್ತು. ಸಕ್ಕರೆ, ಅಕ್ಕಿ ಮುಂತಾದ ಕೃಷಿ ಉತ್ಪನ್ನಗಳಿಂದ ತೆಗೆದ ಇಥೆನಾಲನ್ನು ಪೆಟ್ರೋಲ್ನಲ್ಲಿ ಸೇರಿಸುವುದರಿಂದ ಅಷ್ಟರಮಟ್ಟಿಗೆ ವಿದೇಶಿ ತೈಲದ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಿಕೊಂಡಂತೆ ಆಗುತ್ತದೆ. ಭಾರತ ತನ್ನ ತೈಲ ಬೇಡಿಕೆಯಲ್ಲಿ ಶೇ. 85ರಷ್ಟನ್ನು ಹೊರದೇಶಗಳಿಂದ ತರಿಸಿಕೊಳ್ಳುತ್ತಿದೆ. ಪೆಟ್ರೋಲ್-ಇಥೆನಾಲ್ ಮಿಶ್ರಣದಿಂದ ದ್ವಿಚಕ್ರ ವಾಹನಗಳ ಮತ್ತು ಕಾರುಗಳ ಕಾರ್ಬನ್ ಮೊನಾಕ್ಸೈಡ್ ಹೊರಸೂಸುವಿಕೆಯನ್ನು ಕ್ರಮವಾಗಿ ಶೇ. 50 ಮತ್ತು ಶೇ. 30ರಷ್ಟು ಕಡಿಮೆ ಮಾಡಬಹುದಾಗಿದೆ.
ಟ್ರಕ್ಗಳ ತೂಕ ಪತ್ತೆಗೆ ಕ್ಯಾಮರಾ: ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ತೂಕ ಹಾಕಿಕೊಂಡು ಸಂಚರಿಸುವ ಟ್ರಕ್ಗಳನ್ನು ಪತ್ತೆ ಮಾಡಲು ನಿರ್ದಿಷ್ಟ ಕ್ಯಾಮರಾಗಳನ್ನು ಹೆದ್ದಾರಿಗಳಲ್ಲಿ ಅಳವಡಿಸುವ ಕುರಿತು ಕೂಡ ಚಿಂತನೆ ನಡೆದಿದೆ ಎಂದು ಸಚಿವ ಗಡ್ಕರಿ ತಿಳಿಸಿದರು. ‘ರಸ್ತೆಯಲ್ಲಿ ಸಾಗುತ್ತಿರುವಾಗಲೇ ಕ್ಯಾಮರಾಗಳು ಟ್ರಕ್ನ ತೂಕ ಪತ್ತೆ ಮಾಡಲಿವೆ. ಓವರ್ವೇಟ್ ಇದ್ದರೆ ಟ್ರಕ್ ಮಾಲೀಕರ ವಿಳಾಸಕ್ಕೇ ತಕ್ಷಣವೇ ದಂಡದ ನೋಟಿಸ್ ಹೋಗುತ್ತದೆ. ಇಲ್ಲವೇ ಮುಂದಿನ ಟೋಲ್ನಲ್ಲಿ ಆ ಟ್ರಕ್ ಅಥವಾ ಸರಕು ಸಾಗಣೆ ವಾಹನವನ್ನು ನಿಲ್ಲಿಸಿ ದಂಡ ವಿಧಿಸಲು ಅವಕಾಶವಾಗುತ್ತದೆ’ ಎಂದು ವಿವರಿಸಿದರು.