ನ್ಯೂಸ್

ಕರೂರ್​ ಕಾಲ್ತುಳಿತ ಪ್ರಕರಣ; ನಾಳೆ ಸಂತ್ರಸ್ತ ಕುಟುಂಬಗಳಿಂದ ನಟ ವಿಜಯ್​ ಭೇಟಿ ಸಾಧ್ಯತೆ, 50 ರೂಮ್​ ಬುಕ್​.? | Karur stampede

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಕಳೆದ ತಿಂಗಳು ನಡೆದ ಕಾಲ್ತುಳಿತ (Karur stampede) ದುರಂತದ ಸಂತ್ರಸ್ತರ ಕುಟುಂಬಗಳ ಸದಸ್ಯರನ್ನು, ನಟ ವಿಜಯ್ ಸೋಮವಾರ (ಅ 27) ಮಹಾಬಲಿಪುರಂ ಹೋಟೆಲ್‌ನಲ್ಲಿ ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಈ ಸಭೆಗೆ ಮಾಧ್ಯಮದವರನ್ನು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಹೊರಗಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ವಿಜಯ್​ರ ತಮಿಳಗ ವೆಟ್ರಿ ಕಳಗಂ (ಟಿವಿಕೆ), ರೆಸಾರ್ಟ್‌ನಲ್ಲಿ ಸಂತ್ರಸ್ತ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಾಂತ್ವನ ಹೇಳಲು 50 ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ ಎಂದು ತಿಳಿದುಬಂದಿದೆ.

ಕರೂರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರು, ನಾವು ಹೊಟೆಲ್​ಗೆ ತೆರಳಲು ವಿಜಯ್​ ಕಡೆಯವರು ಬಸ್ ವ್ಯವಸ್ಥೆ ಮಾಡಿದ್ದು. ನಮ್ಮಲ್ಲಿನ ಅನೇಕರು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ದುರಂತದಲ್ಲಿ ತನ್ನ ಅಪ್ರಾಪ್ತ ಪುತ್ರಿಯರನ್ನು ಕಳೆದುಕೊಂಡ ವ್ಯಕ್ತಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಸಂತ್ರಸ್ತ ಕುಟುಂಬಗಳು ವಿಜಯ್​ರನ್ನು ಭೇಟಿ ಮಾಡುವುದು ಸೂಕ್ತವಲ್ಲ ಎಂದಿದ್ದು, ಅವರೇ ಕುಟುಂಬಗಳನ್ನು ಭೇಟಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಈ ಸಭೆಯು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದು, ಕೆಲವು ಬಳಕೆದಾರರು, ವಿಜಯ್​ ತಾವೇ ಕರೂರ್‌ಗೆ ಭೇಟಿ ನೀಡುವ ಬದಲು ಸಂತ್ರಸ್ತ ಕುಟುಂಬಗಳನ್ನೆ ತಾವಿದ್ದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿ ಕರೆಸಿಕೊಳ್ಳುತಿದ್ದಾರೆ ಎಂದು ಟೀಕಿಸಿದ್ದಾರೆ. ಇತ್ತ ಕರೂರ್‌ನಲ್ಲಿ ಸಂತ್ರಸ್ತರನ್ನು ಭೇಟಿ ಮಾಡಲು ಅಧಿಕಾರಿಗಳು ಅನುಮತಿ ನೀಡದ ಸಲುವಾಗಿ ವಿಜಯ್ ಈ ವ್ಯವಸ್ಥೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಂದಿನ ವರ್ಷದ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಸಂಭವಿಸಿರುವ ಕರೂರಿನ ಕಾಲ್ತುಳಿತ ಪ್ರಕರಣ, ರಾಜ್ಯ ರಾಜಕೀಯದಲ್ಲಿ ಹೊಸ ಅಲೆಗಳನ್ನು ಸೃಷ್ಠಿಸಿದ್ದು, ಈ ಘಟನೆಯ ಬಗ್ಗೆ ಬಿಜೆಪಿ ಮತ್ತು ಆಡಳಿತಾರೂಢ ಡಿಎಂಕೆ ಸೇರಿದಂತೆ ಪ್ರಮುಖ ಪಕ್ಷಗಳು ವಿಜಯ್ ಕುರಿತಾಗಿ ಮೃದು ಧೋರಣೆ ತಳೆದಿವೆ. ಕಳೆದ ಕೆಲ ವಾರಗಳ ಹಿಂದೆ ನಟ ವಿಜಯ್, ದುರಂತದಲ್ಲಿ ಪ್ರಾಣ ಕಳೆದುಕೊಂಡವರ, ಮತ್ತು ಗಾಯಾಳುಗಳ ಕುಟುಂಬದವರಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡಿ ಸಾಂತ್ವನ ಹೇಳಿ, ಅವರೊಂದಿಗೆ ನಿಲ್ಲುವ ಭರವಸೆ ನೀಡಿದ್ದರು.

ಕಾಲ್ತುಳಿತ ದುರಂತದಲ್ಲಿ 41 ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡಿದ್ದರು. ಸಿಬಿಐ ಕರೂರ್ ಕಾಲ್ತುಳಿತ ಪ್ರಕರಣದ ಎಫ್‌ಐಆರ್ ಅನ್ನು ಮರು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದೆ.(ಏಜೆನ್ಸೀಸ್​)