ನ್ಯೂಸ್

ರಾಜ್ಯದಲ್ಲಿ ಮುಂಗಾರು ಚುರುಕು: ನಾಳೆ ಹಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ಸತತ 15 ದಿನಗಳಿಂದ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಮಾರುತಗಳು ಈಗ ಚುರುಕು ಪಡೆದಿರುವುದರ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಬಿರುಸುಗೊಂಡಿದೆ.

ಶುಕ್ರವಾರ ರಾಮನಗರದ ಚಂದುರಯಂಗಹಳ್ಳಿ 88 ಮಿಮೀ, ತುಮಕೂರಿನ ಕುಣಿಗಲ್ 84 ಮಿಮೀ, ದಕ್ಷಿಣಕನ್ನಡದ ಸುಳ್ಯ 51 ಮಿಮೀ, ಬೆಂಗಳೂರು 39 ಮಿಮೀ, ಮಂಡ್ಯ33 ಮಿಮೀ, ಮೈಸೂರಿನ ಸುತ್ತೂರು 33 ಮಿಮೀ ಮತ್ತು ಉತ್ತರ ಕನ್ನಡದ ನಿಲಗುಂದ 28 ಮಿಮೀ ಮಳೆಯಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಜೂ. 18ರಂದು ಯೆಲ್ಲೋ ಅಲರ್ಟ್ ಇದ್ದರೆ, ಜೂ 19ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಭಾಗಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಚಿತ್ರದುರ್ಗ, ರಾಮನಗರ, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಒಳನಾಡಿನಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ರಾಜ್ಯಾದ್ಯಂತ ಮಾರುತಗಳು ವ್ಯಾಪಿಸಿದ್ದು, ತೇವಾಂಶ ಭರಿತ ಮೋಡಗಳು ಇರುವುದರಿಂದ ಉತ್ತಮ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.