ನ್ಯೂಸ್

ಮುಂಬೈನಲ್ಲಿ ಭಾರೀ ಮಳೆ; 200ಕ್ಕೂ ಅಧಿಕ ಪ್ರಯಾಣಿಕರಿರುವ ಮೊನೊ ರೈಲು ಏಕಾಏಕಿ ಸ್ಥಗಿತ!

ಬಾಬುಪ್ರಸಾದ್​ ಮೋಡಿಸ್​

Heavy Rains: ಮುಂಬೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರಾದ್ಯಂತ ರಸ್ತೆಗಳು ಸಂಪೂರ್ಣ ಜಲಾವೃತ್ತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ, ರೈಲು ಸೇರಿದಂತೆ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ. ಇದೀಗ ಸಂಜೆ 200ಕ್ಕೂ ಅಧಿಕ ಪ್ರಯಾಣಿಕರಿರುವ ಮೊನೊ ರೈಲು ಏಕಾಏಕಿ ಸ್ಥಗಿತಗೊಳ್ಳುವ ಮೂಲಕ ಆಂತಕದ ವಾತಾವರಣವನ್ನು ಸೃಷ್ಟಿ ಮಾಡಿದೆ.

ಭಾರೀ ಮಳೆಯಿಂದಾಗಿ ಮೋನೋರೈಲ್ ರೈಲು ಕೆಟ್ಟು ನಿಂತಿದೆ. ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಲವಾರು ಪ್ರಯಾಣಿಕರು ರೈಲಿನೊಳಗೆ ಸಿಲುಕಿಕೊಂಡಿದ್ದರು. ಎತ್ತರದ ಹಳಿಯಲ್ಲಿ ಚಲಿಸುವ ಮೋನೋರೈಲ್ ರೇಕ್, ಸಣ್ಣ ವಿದ್ಯುತ್ ಸರಬರಾಜು ಸಮಸ್ಯೆಯಿಂದಾಗಿ ಸಿಲುಕಿಕೊಂಡಿದೆ ಎಂದು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ತಿಳಿಸಿದೆ.

"ನಮ್ಮ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಈಗಾಗಲೇ ಸ್ಥಳದಲ್ಲಿದ್ದು, ಅದನ್ನು ತ್ವರಿತವಾಗಿ ಪರಿಹರಿಸಲು ಕೆಲಸ ಮಾಡುತ್ತಿವೆ" ಎಂದು MMRDA ಹೇಳಿದೆ.

ಫಡ್ನವೀಸ್ ಭರವಸೆ

"ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು" ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ "ಎಲ್ಲರೂ ತಾಳ್ಮೆಯಿಂದಿರಲು ನಾನು ವಿನಂತಿಸುತ್ತೇನೆ. ನಾನು MMRDA ಆಯುಕ್ತರು, ಪುರಸಭೆ ಆಯುಕ್ತರು, ಪೊಲೀಸರು ಮತ್ತು ಎಲ್ಲಾ ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ಘಟನೆ ಏಕೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುವುದು" ಎಂದು ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ನಗರ ಸಂಚಾರ ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರವಾಹದಿಂದಾಗಿ ವಾಹನ ಸವಾರರು ಹಾಗೂ ಪದಾಚಾರಿಗಳು ರಸ್ತೆಗಳಲ್ಲಿ ಸಂಚರಿಸುಲು ಹೆಣಗಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.(ಏಜೆನ್ಸೀಸ್​)