ಮೀರತ್ (ಉತ್ತರ ಪ್ರದೇಶ): ಕರೊನಾದಿಂದ ಮೊದಲೇ ತತ್ತರಿಸಿಹೋಗಿರುವ ಉತ್ತರ ಪ್ರದೇಶದಲ್ಲಿ ಈಗ ಮಂಗನ ಹಾವಳಿಯೂ ಹೆಚ್ಚಾಗಿಬಿಟ್ಟಿದೆ. ಇಲ್ಲಿಯ ಮೀರತ್ನಲ್ಲಿ ಕರೊನಾ ಸೋಂಕು ಶಂಕಿತರಿಂದ ಸಂಗ್ರಹಿಸಿದ್ದ ಗಂಟಲು ದ್ರವದ ಸ್ಯಾಂಪಲ್ಗಳನ್ನು ಕೋತಿಗಳು ಎತ್ತಿಕೊಂಡು ಹೋಗಿಬಿಟ್ಟಿವೆ!
ಮೀರತ್ ಮೆಡಿಕಲ್ ಕಾಲೇಜಿನಲ್ಲಿ ಸ್ಯಾಂಪಲ್ಗಳನ್ನು ಕೊಂಡೊಯ್ಯುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಮಂಗಗಳು ಈ ಕೃತ್ಯ ಎಸಗಿವೆ! ಇವರು ಮೂವರು ಕರೊನಾ ಶಂಕಿತರ ಸ್ಯಾಂಪಲ್ಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಮಂಗಗಳ ಹಿಂಡು ಸ್ಯಾಂಪಲ್‌ಗಳನ್ನ ಎಳೆದುಕೊಂಡು ಹೋಗಿವೆ.
ಸ್ಯಾಂಪಲ್ಗಳು ಹೋಗಿರುವುದು ಒಂದೆಡೆ ಭೀತಿ ತಂದರೆ, ಆ ಸ್ಯಾಂಪಲ್ಗಳನ್ನು ಸಂಗ್ರಹಿಸಿರುವ ಶಂಕಿತರದಲ್ಲಿ ಸೋಂಕು ಇದ್ದರೆ ಈ ಮಂಗನಿಂದಾಗಿ ಎಲ್ಲಿ ಅದು ಹರಡುವುದೋ ಎಂಬ ಭಯ ಇನ್ನೊಂದೆಡೆ ಶುರುವಾಗಿದೆ. ಅದು ದ್ರವದ ರೂಪದಲ್ಲಿ ಇರುವ ಹಿನ್ನೆಲೆಯಲ್ಲಿ, ಮಂಗಗಳು ಅದನ್ನು ಎಲ್ಲಿಯಾದರೆ ಚೆಲ್ಲಿದರೆ ಸೋಂಕು ಹರಡಬಹುದು ಎಂಬ ಭಯ ಕಾಡತೊಡಗಿದೆ.
ಸ್ಯಾಂಪಲ್ಗಳನ್ನು ಕೊಂಡೊಯ್ದ ಮಂಗಗಳು ಮರದ ಮೇಲೆ ಕುಳಿತು ಕಿಟ್ ಜಗಿಯುತ್ತಿದ್ದು, ಸೋಂಕಿನ ಭೀತಿ ಇನ್ನಷ್ಟು ಹೆಚ್ಚಾಗಿದೆ. ಇದರ ವಿಡಿಯೋಯನ್ನು ಸ್ಥಳೀಯರು ಮಾಡಿದ್ದು ಅದೀಗ ಭಾರಿ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯ ಜನರನ್ನು ಇನ್ನಷ್ಟು ಭೀತಿಗೆ ಸಿಲುಕಿಸಿದೆ.
ಮಂಗಗಳ ಹಾವಳಿ ಇಲ್ಲಿ ಹೆಚ್ಚಾಗಿದ್ದು, ಹಿಂದೆ ಕೂಡ ನಮಗೆ ಸಾಕಷ್ಟು ತೊಂದರೆ ನೀಡಿವೆ ಎಂದಿದ್ದಾರೆ ವೈದ್ಯಕೀಯ ಸಿಬ್ಬಂದಿ. ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಈ ಸಂಬಂಧ ತನಿಖೆಗೆ ಆದೇಶಿಸಿದ್ದು, ಕೋತಿಗಳನ್ನ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.