ನ್ಯೂಸ್

ಕಪಿರಾಯನ ಚೇಷ್ಟೆಗೆ ಐಷಾರಾಮಿ ಕಾರಿನ Sunroof ಢಮಾರ್​; ಮುಂದೇನಾಯ್ತು ನೀವೇ ನೋಡಿ

ಲಖನೌ: ವಿಚಿತ್ರ ಘಟನೆಯೊಂದರಲ್ಲಿ ಮಂಗವೊಂದು ಕಾರಿನ ಸನ್​ರೂಫ್​ (Sunroof) ಮೇಲೆ ಜಿಗಿದು ಅದನ್ನು ಪುಡಿ ಮಾಡಿರುವ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರು ಕಾರಿನ ಮಾಲೀಕನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.

ವಾರಣಾಸಿಯ ವಿಶ್ವೇಶ್ವರಗಂಜ್​ನಲ್ಲಿ ನವೆಂಬರ್​ 19ರಂದು ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ನಮ್ಮ ದೇಶದಲ್ಲಿ ಸನ್‌ ರೂಫ್‌ ಇರುವ ಕಾರುಗಳ ಅಗತ್ಯವಿದೆಯೇ ಎಂದು ಕಮೆಂಟ್​ ಹಾಕಿದ್ಧಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕಟ್ಟಡವೊಂದರಿಂದ ಜಿಗಿದ ಮಂಗವು ಐಷಾರಾಮಿ ಕಾರ್​ನ ಸನ್​ರೂಫ್ ಮೇಲೆ ಬಿದ್ದು ಅದನ್ನು ಪುಡಿ ಪುಡಿ ಮಾಡಿದೆ. ಮೊದಲಿಗೆ ವಿಡಿಯೋ ನೋಡಿದವರು ಮಂಗಕ್ಕೆ ದೊಡ್ಡ ಮಟ್ಟದಲ್ಲಿ ಗಾಯ ಆಗಿದೆ ಎಂದು ಭಾವಿಸಿದರಾದರು ಆ ನಂತರ ನಿರಾಯಸವಾಗಿ ಆಚೆ ಬಂದು ಓಡಿ ಹೋಗುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ರಾಜಾ ಬಾಬು ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು,  ಈವರೆಗೆ 834.6 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.

ಇತ್ತ ವೈರಲ್​ ವಿಡಿಯೋಗೆ ನೆಟ್ಟಿಗರು ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಮಂಗವೆಂದರೇ ಚೇಷ್ಟೆಗೆ ಕುಚೇಷ್ಟೆಗೆ ಇನ್ನೊಂದು ಹೆಸರು. ಈ ವಾನರ ಮಾಡಿದ ಅವಾಂತರವನ್ನು ಕಂಡ ಸೋಷಿಯಲ್ ಮೀಡಿಯಾ ಜನರು ಕಾರ್ ಮಾಲೀಕನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.