ನವದೆಹಲಿ: ಬಾಂಗ್ಲಾದಲ್ಲಿ ಇಸ್ಕಾನ್ ಸಂಸ್ಥೆಯ ಸನ್ಯಾಸಿ ಚಿನ್ಮಯ್ ದಾಸ್(Monk Chinmay Das) ಅವರನ್ನು ಅನ್ಯಾಯವಾಗಿ ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಚಾರ ಕುರಿತು ಉಲ್ಲೇಖಿಸಿರುವ ಅವರು, ಅಲ್ಲಿನ ನ್ಯಾಯಾಲಯದ ಆವರಣದಲ್ಲಿ ನಡೆದ ವಕೀಲರೊಬ್ಬರ ಹತ್ಯೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಹತ್ಯೆ ಮಾಡಿದರು ''ಭಯೋತ್ಪಾದಕರು'' ಎಂದು ಕುಟುಕಿದ್ದಾರೆ. ಹತ್ಯೆಯಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ''ಅಸಂವಿಧಾನಿಕವಾಗಿ ನಮ್ಮ ಸರ್ಕಾರವನ್ನು ವಶಪಡಿಸಿಕೊಂಡು ಯೂನಸ್ ಅವರು ಮಧ್ಯಂತರ ಸರ್ಕಾರ ನೇಮಿಸಲಾಗಿದೆ. ಈ ಸರ್ಕಾರ ಇಂತಹ ಭಯೋತ್ಪಾದಕರನ್ನು ಶಿಕ್ಷಿಸಲು ವಿಫಲವಾದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಲ್ಲದೆ, ಈ ಉಲ್ಲಘಂನೆಯಿಂದ ನೀವು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಈ ರೀತಿಯ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ನಿಲ್ಲುವಂತೆ ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ" ಎಂದಿದ್ದಾರೆ.
"ಪ್ರಸ್ತುತ ಅಧಿಕಾರ ಹಿಡಿದವರು ಎಲ್ಲಾ ಕ್ಷೇತ್ರಗಳಲ್ಲಿ ವಿಫಲತೆಯನ್ನು ತೋರಿಸುತ್ತಿದ್ದಾರೆ. ಮೊದಲು ಸಾಮಾನ್ಯ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ ಎಂದಿರುವ ಅವರು, ಸನಾತನ ಧಾರ್ಮಿಕ ಸಮುದಾಯದ ಸನ್ಯಾಸಿಯನ್ನು ಅನ್ಯಾಯವಾಗಿ ಬಂಧಿಸಲಾಗಿದೆ, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಚಿತ್ತಗಾಂಗ್‌ನಲ್ಲಿ ದೇವಸ್ಥಾನವನ್ನು ಸುಟ್ಟು ಹಾಕಲಾಗಿದೆ. ಈ ಹಿಂದೆ ಅಹ್ಮದೀಯ ಸಮುದಾಯದ ಮಸೀದಿಗಳು, ದೇವಾಲಯಗಳು, ಚರ್ಚ್‌ಗಳು, ಮಠಗಳು ಮತ್ತು ಮನೆಗಳ ಮೇಲೆ ದಾಳಿ, ಧ್ವಂಸ ಮತ್ತು ಲೂಟಿ ಮಾಡಲಾಗಿತ್ತು. ಎಲ್ಲಾ ಸಮುದಾಯಗಳ ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಜೀವನ ಮತ್ತು ಆಸ್ತಿಯ ಭದ್ರತೆಯನ್ನು ಖಾತ್ರಿಪಡಿಸಬೇಕು'' ಎಂದು ಒತ್ತಾಯಿಸಿದ್ದಾರೆ,(ಏಜೆನ್ಸೀಸ್).