ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ರೈಲು ಅಪಘಾತಗಳು (Train Derail) ಸಾಮಾನ್ಯವಾಗಿವೆ. 2024ರಲ್ಲೇ ಇಲ್ಲಿಯವರೆಗೆ 21 ರೈಲುಗಳು ಹಳಿ ತಪ್ಪಿವೆ. ಸರಾಸರಿ ಎರಡು ವಾರಕ್ಕೆ ಒಂದು ರೈಲು ಅವಘಡ! ಕಳೆದ 3 ವರ್ಷಗಳಲ್ಲಿ ಒಟ್ಟು 130ಕ್ಕೂ ಹೆಚ್ಚು ರೈಲು ಅಪಘಾತಗಳು ಸಂಭವಿಸಿವೆ. ತಮಿಳುನಾಡಿನಲ್ಲಿ ಮೈಸೂರು-ದರ್ಭಾಂಗ್ ರೈಲಿನ 12 ಬೋಗಿಗಳು ಹಳಿ ತಪ್ಪಿ 19 ಜನರಿಗೆ ಗಾಯಗಳಾಗಿದ್ದು ತೀರ ಇತ್ತೀಚಿನ ಘಟನೆ. 2023ರಲ್ಲಿ ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲು ಅಪಘಾತದ ರೀತಿಯಲ್ಲೇ ಈ ಅಪಘಾತ ಸಂಭವಿಸಿದೆ. ಸಿಗ್ನಲ್ನಲ್ಲಿ ಆಗಿರುವ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ಬಗ್ಗೆ ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ತಂಡ (NIA) ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದು, ನಿಖರ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ತಿಳಿಯಲಿದೆ. ಪಶ್ಚಿಮ ಬಂಗಾಳದಲ್ಲಿ ಕೆಲವು ವಾರಗಳ ಹಿಂದಷ್ಟೇ ಕಾಂಚನಜುಂಗಾ ಎಕ್ಸ್ಪ್ರೆಸ್ ಅಪಘಾತಕ್ಕೆ ಒಳಗಾಗಿ, ಒಂಬತ್ತು ಜನರು ಪ್ರಾಣ ಕಳೆದುಕೊಂಡರು.
ಇಂತಹ ಅವಘಡಗಳನ್ನು ತಪ್ಪಿಸಲೆಂದೇ ರೂಪಿಸಲಾದ ಕವಚ್ ವ್ಯವಸ್ಥೆಯನ್ನು ಈವರೆಗೆ ಎಲ್ಲೆಡೆ ಅಳವಡಿಸಿಲ್ಲ. ‘ಕವಚ್ ವ್ಯವಸ್ಥೆಯನ್ನು ಹಂತ ಹಂತವಾಗಿ ಎಲ್ಲ ಕಡೆ ಜಾರಿಗೆ ತರಲಾಗುವುದು’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆಶ್ವಾಸನೆ ನೀಡಿದ್ದಾರಾದರೂ, ‘ಕವಚ್’ ಅನುಷ್ಠಾನಕ್ಕೆ ವೇಗ ನೀಡಬೇಕಿದೆ. ಈಗಿರುವ ಸಿಗ್ನಲಿಂಗ್ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆ. ಸಿಗ್ನಲ್ ಸಮಸ್ಯೆ ಅಥವಾ ಸಿಗ್ನಲ್ ವ್ಯವಸ್ಥೆಯಲ್ಲಿನ ವೈಫಲ್ಯದಿಂದ ಇತ್ತೀಚಿನ ದಿನಗಳಲ್ಲಿ ರೈಲು ಅಪಘಾತಗಳು ಹೆಚ್ಚುತ್ತಿವೆ. ಪ್ರಯಾಣಿಕರ ಸುರಕ್ಷತೆ ನಿಟ್ಟಿನಲ್ಲಿ ಇದು ಕಳವಳ ಮೂಡಿಸುವಂಥದ್ದು. ರೈಲ್ವೆಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುತ್ತಿರುವುದು ಸ್ವಾಗತಾರ್ಹ. ಆದರೆ, ರೈಲ್ವೆಯ ಸುರಕ್ಷತೆಯನ್ನು ಕಡೆಗಣನೆ ಮಾಡುವಂತಿಲ್ಲ. ಹಳಿಗಳ ಬದಲಾವಣೆ, ರಿಪೇರಿ, ನಿರ್ವಹಣೆಗೆ ಸೂಕ್ತ ಗಮನ ನೀಡಬೇಕಿದೆ. ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಯೋಜನೆಗಳ ಮೌಲ್ಯಮಾಪನ ನಡೆಸುವುದು ಅಗತ್ಯ.
ಅತಿಯಾದ ಕೆಲಸದ ಒತ್ತಡವು ರೈಲ್ವೆ ಇಲಾಖೆಯ ಸಿಬ್ಬಂದಿಯನ್ನು ಹೈರಾಣುಗೊಳಿಸಿದೆ. ರೈಲ್ವೆ ಚಾಲಕರು ದಿನಕ್ಕೆ 12 ಗಂಟೆಗಳಷ್ಟು ಕೆಲಸ ನಿರ್ವಹಿಸುತ್ತಿದ್ದು, ಒತ್ತಡ ಎದುರಿಸುತ್ತಿದ್ದಾರೆ. ರೈಲು ಚಾಲಕರು ಮತ್ತು ಸಹಾಯಕ ಚಾಲಕರ 18 ಸಾವಿರ ಹುದ್ದೆಗಳು ಖಾಲಿ ಇದ್ದರೂ, ಸರ್ಕಾರ ಅವುಗಳ ಭರ್ತಿಗೆ ಮುಂದಾಗದೆ ಈಗಿರುವ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಿಸುತ್ತಿರುವುದು ಸರಿಯಲ್ಲ. ರೈಲ್ವೆ ಸಿಬ್ಬಂದಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆಯೂ ಸಾಕಷ್ಟು ಅಸಮಾಧಾನ ಹೊಂದಿದ್ದಾರೆ.
ಕೇಂದ್ರ ಸರ್ಕಾರ ಈ ಎಲ್ಲ ಸಮಸ್ಯೆಗಳ ಕುರಿತು ತುರ್ತು ಗಮನ ಹರಿಸಬೇಕು, ಸಿಬ್ಬಂದಿಯ ಹಿತರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ, ಪ್ರಯಾಣಿಕರ ಸುರಕ್ಷತೆಯನ್ನು ಖಾತರಿ ಪಡಿಸುವುದು ರೈಲ್ವೆ ಇಲಾಖೆಯ ಜವಾಬ್ದಾರಿಯಾಗಿದೆ. ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಪ್ರಯಾಣಕ್ಕೆ ರೈಲ್ವೆಯನ್ನು ಅವಲಂಬಿಸಿದ್ದು, ಸುರಕ್ಷೆಯೇ ಮರೀಚಿಕೆಯಾದರೆ ಇಲಾಖೆ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳಬಹುದು. ಹಾಗಾಗುವ ಮುನ್ನ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು, ಸುಧಾರಣಾ ಕ್ರಮಗಳತ್ತ ಹೊರಳಲಿ.