ಮುಂಬೈ: ಹಣಕಾಸಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಉದ್ಯಮಿ ದೀಪಕ್ ಕೊಚ್ಚಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ಗುರುವಾರ ತಿರಸ್ಕರಿಸಿದೆ. ದೀಪಕ್ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ ಪತಿ. ಇವರು ಕೂಡ ಮನಿ ಲಾಂಡರಿಂಗ್ ಕೇಸ್ನಲ್ಲಿ ಆರೋಪಿ.
ಐಸಿಐಸಿಐ ಬ್ಯಾಂಕ್ ಮತ್ತು ವಿಡಿಯೋಕಾನ್ ನಡುವಿನ ಹಣಕಾಸಿನ ವಹಿವಾಟಿನಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್ಎ) ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ದೀಪಕ್ ಕೊಚ್ಚಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನಿಗದಿತ ಅವಧಿಯೊಳಗೆ ತನಿಖಾ ಸಂಸ್ಥೆ ಆರೋಪ ಪಟ್ಟಿ ಸಲ್ಲಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಕಕ್ಷಿದಾರನಿಗೆ ಜಾಮೀನು ನೀಡಬೇಕು ಎಂದು ದೀಪಕ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಡಿಫಾಲ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ಪಿಎಂಎಲ್ಎ ಜಡ್ಜ್, ಮುಂದಿನ ವಿಚಾರಣೆಯನ್ನು ನವೆಂಬರ್ 23ಕ್ಕೆ ನಿಗದಿಮಾಡಿದ್ದಾರೆ. ತನಿಖಾ ಸಂಸ್ಥೆ ಆರೋಪ ಪಟ್ಟಿಯನ್ನು ನವೆಂಬರ್ 3ರಂದೇ ಸಲ್ಲಿಸಿದ್ದಾರೆ. ಆದರೆ, ಅದು ಪರಿಶೀಲನೆಯ ಹಂತದಲ್ಲಿ ಬಾಕಿ ಇದೆ ಎಂಬ ಅಂಶದತ್ತ ಜಾರಿ ನಿರ್ದೇಶನಾಲಯ ಪರ ವಕೀಲ ಹಿತೇನ್ ವೆನೆಗಾಂವ್ಕರ್ ತಿಳಿಸಿದ್ದಾರೆ. (ಏಜೆನ್ಸೀಸ್)