ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ‘ಮಾಂಡಸ್’ ಚಂಡಮಾರುತ ಪರಿಣಾಮ ಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಬೆಂಗಳೂರು, ಬೆಂ.ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬೀದರ್ ಮತ್ತು ವಿಜಯಪುರ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಿ.9ರಿಂದ ಡಿ.12ರವರೆಗೆ ಗುಡುಗು ಮಿಂಚು ಸಹಿತ ಜೋರಾಗಿ ಮಳೆ ಬೀಳಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚೆನ್ನೈ 500 ಕಿ.ಮೀ. ದೂರದಲ್ಲಿ ಇರುವ ಮಾರುತಗಳು ತಮಿಳುನಾಡು, ಪುದುಚೇರಿ, ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದತ್ತ ಚಲಿಸುತ್ತಿವೆ. ಇದರಿಂದ ಮುಂದಿನ ನಾಲ್ಕು ದಿನಗಳು ಆ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ. ಗಂಟೆಗೆ 65-75 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ. ಕ್ಷಣ ಕ್ಷಣಕ್ಕೂ ಗಾಳಿಯ ವೇಗ ಹೆಚ್ಚುತ್ತಿರುವ ಜತೆಗೆ ಜೋರಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ಸಮುದ್ರ ತೀರದ ಜನರು ಎಚ್ಚರಿಕೆ ವಹಿಸುವಂತೆ ಐಎಂಡಿ ಸಲಹೆ ನೀಡಿದೆ.
ಭಾರಿ ಮಳೆಯಿಂದ ತಗ್ಗು ಪ್ರದೇಶಗಳು ಮುಳುಗಡೆ, ರಸ್ತೆಗಳು ಹಾಳಾಗುವುದು, ಮನೆಗಳ ಕುಸಿತ ಆಗುವುದು ಹಾಗೂ ವಿದ್ಯುತ್ ಹಾನಿಯಾಗುವುದು ಸೇರಿ ಇತರ ಮಳೆ ಅವಘಡಗಳು ಸಂಭವಿಸಬಹುದು ಎಂದು ಐಎಂಡಿ ಎಚ್ಚರಿಕೆ ಕೊಟ್ಟಿದೆ.