ತಿರುವನಂತಪುರಂ: ಮಲಯಾಳಂ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಸೇರಿದಂತೆ ತಾವು ಅನುಭವಿಸಿದ ಆಘಾತಕಾರಿ ಘಟನೆಗಳು ಮತ್ತು ವೇದನೆಗಳನ್ನು ನಟಿಯರು ಬಹಿರಂಗಪಡಿಸುತ್ತಿದ್ದು ಮಾಲಿವುಡ್ನಲ್ಲಿ ನಟರ ದುರ್ನಡತೆ ಬಗ್ಗೆ ಸಂಚಲನ ಮೂಡಿಸುತ್ತಿದೆ. ಈಗ ಇಂತಹುದೇ ಆರೋಪವನ್ನು ನಟಿ ಮಿನು ಮುನೀರ್ ಮಾಡಿದ್ದು, ನಾಲ್ವರು ಪ್ರಮುಖರಿಂದ ಈ ಹಿಂದೆ ಲೈಂಗಿಕ ದೌರ್ಜನ್ಯ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ
2013 ರಲ್ಲಿ ಚಲನಚಿತ್ರವೊಂದರ ಸೆಟ್‌ನಲ್ಲಿ ನಾಲ್ವರು ಮಾಲಿವುಡ್ ಪ್ರಮುಖರಾದ ಮುಖೇಶ್, ಮಣಿಯನ್ಪಿಳ್ಳೈ ರಾಜು, ಇಡವೇಲ ಅಬು ಮತ್ತು ಜಯಸೂರ್ಯ ತನ್ನನ್ನು ದೈಹಿಕವಾಗಿ ಮತ್ತು ಕೀಳುಮಟ್ಟಡ ಮಾತುಗಳಲ್ಲಿ ನಿಂದಿಸಿದ್ದಾರೆ ಎಂದು ನಟಿ ಮಿನು ಮುನೀರ್ ಫೇಸ್‌ಬುಕ್ ರೀಲ್ಸ್‌ನಲ್ಲಿ ಹೇಳಿದ್ದಾರೆ.
ಇವರಿಂದ ನಾನು ಯಾತನೆ ಅನುಭವಿಸಿದೆ. ಆದರೆ ಬಳಿಕ ಅವರಿಗೆ ಸಹಕರಿಸಲು ಯತ್ನಿಸಿದೆ. ಆದರೆ ನಿಂದನೆ, ದೌರ್ಜನ್ಯ ಅಸಹನೀಯವಾಯಿತು. ಕಡೆಗೆ ನನ್ನನ್ನು ಅಂತಿಮವಾಗಿ ಮಾಲಿವುಡ್ ತೊರೆದು ಚೆನ್ನೈಗೆ ಸ್ಥಳಾಂತರಗೊಳ್ಳುವಂತೆ ಮಾಡಿತು ಎಂದು ಆಕೆ ಎದುರಿಸಿದ ದೌರ್ಜನ್ಯದ ಕುರಿತು ಬರೆದುಕೊಂಡಿದ್ದಾರೆ.
ಇನ್ನು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದಲ್ಲಿ ಸದಸ್ಯತ್ವ ನೀಡುವುದಕ್ಕೆ ಪದಾಧಿಕಾರಿ ಎಡವೇಲ ಬಾಬು ಲೈಂಗಿಕವಾಗಿ ಪ್ರಯೋಜನವನ್ನು ಬಯಸಿದ್ದಾಗಿ ಮಿನು ಗಂಭೀರ ಆರೋಪ ಮಾಡಿದ್ದಾರೆ. 2008 ರಲ್ಲಿ 'ದೇ ಇಂಗೊಟ್ಟು ನೋಕ್ಕಿಯೇ' ಸೆಟ್‌ನಲ್ಲಿ ನಟ ಜಯಸೂರ್ಯ ತನ್ನೊಂದಿಗೆ ಅನುಚಿತವಾಗಿ ನಡೆದುಕೊಂಡರು. ಈ ಘಟನೆಯ ಬಗ್ಗೆ ನಟ ಜಗತಿ ಶ್ರೀಕುಮಾರ್‌ಗೆ ತಿಳಿಸಲು ಪ್ರಯತ್ನಿಸಿದಾಗ, ತಿರುವನಂತಪುರಂನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ಗೆ ಬರುವಂತೆ ಒತ್ತಡ ಹೇರಿದ್ದರು. ಆದರೆ ಅದನ್ನು ನಿರಾಕರಿಸಿದೆ ಎಂದು ನಟಿ ವಿವರಿಸಿದ್ದಾರೆ.
ಅದೇ ರೀತಿ ಆಶಿಕ್ ಅಬು ಅವರ 'ದಾ ತಡಿಯಾ' ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಮಣಿಯನ್ಪಿಳ್ಳ ರಾಜು ತಾನು ತಂಗಿದ್ದ ಹೋಟೆಲ್ ಕೋಣೆಗೆ ಬರುವುದಾಗಿ ಇಚ್ಚೆ ವ್ಯಕ್ತಪಡಿಸಿದ್ದರು. ಆದರೆ ಅದನ್ನು ನಿರಾಕರಿಸಿದೆ. ಇದಕ್ಕೆ ಮರುದಿನ ಸೆಟ್‌ನಲ್ಲಿ ಅವರು ಕೋಪದಿಂದ ಪ್ರತಿಕ್ರಿಯಿಸಿದರು ಎಂದು ಅವರು ಆರೋಪಿಸಿದರು.
ನಟಿ ಮಿನು ಮುನೀರ್ ಆರೋಪವು ಈಗಾಗಲೇ ಇಂಡಸ್ಟ್ರಿಯಲ್ಲಿ ಎದ್ದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ನಡುವೆ ಬಂದಿದೆ.