ಮಣಿಪುರದಲ್ಲಿ ಗಲಾಟೆ ಆಗುವಾಗ ಭೇಟಿ ನೀಡದೇ, ಪರಿಸ್ಥಿತಿ ಸುಧಾರಿಸಿದ ಮೇಲೆ ಭೇಟಿ ನೀಡುತ್ತಿದ್ದಾರೆ. ಇಷ್ಟು ವರ್ಷ ಏಕೆ ಹೋಗಲಿಲ್ಲ. ವಿರೋಧಪಕ್ಷದವರ ಒತ್ತಡದಿಂದ ಪ್ರಧಾನಿ ಮೋದಿ ಈಗ ಭೇಟಿ ನೀಡುತ್ತಿದ್ದಾರೆ ಎಂದು ಎಂದು ಮುಖ್ಯಮಂತ್ರಿ CM ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ವಿಳಂಬವಾಗುತ್ತಿರುವುದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ವಿಳಂಬವಾಗುತ್ತಿಲ್ಲ. SIT ತನಿಖೆ ಮಾಡುತ್ತಿದ್ದು ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಅನಗತ್ಯವಾಗಿ ವಿಳಂಬ ಮಾಡುವಂತಿಲ್ಲ. ನನಗೆ ತಿಳಿದಂತೆ ವಿಳಂಬವಾಗುತ್ತಿಲ್ಲ ಎಂದು ಹೇಳಿದರು.
ದಸರಾ ಉದ್ಘಾಟಕರ ವಿಚಾರದಲ್ಲಿ ಉದ್ಘಾಟನೆಗೆ ಅವಕಾಶ ಕೊಡಬಾರದು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿರುವ ಬಗ್ಗೆ ಮಾತನಾಡಿ, ನ್ಯಾಯಾಲಯದಲ್ಲಿ ವಿಷಯ ಇತ್ಯರ್ಥವಾಗಲಿ ಎಂದರು. ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ. ಸಾರ್ವತ್ರಿಕ ಹಬ್ಬದಲ್ಲಿ ಎಲ್ಲ ಜಾತಿ ಮತ್ತು ಧರ್ಮದವರು ಭಾಗವಹಿಸಬಹುದು ಎಂದರು.
ಬಿಜೆಪಿ ನಾಯಕರಾದ ಸಿ.ಟಿ ರವಿ, ಬಸನಗೌಡ ಯತ್ನಾಳ್ ಅವರ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿಯವರು ಪ್ರಚೋದನಾ ಕಾರಿಯಾದ ಭಾಷಣ ಮಾಡಿದರೆ ಏನು ಮಾಡಬೇಕು? ಶಾಂತಿ ನೆಮ್ಮದಿಯನ್ನು ಕಾಪಾಡುವುದು ಅತ್ಯಂತ ಅವಶ್ಯಕ. ಅದಕ್ಕಾಗಿ ಪ್ರಚೋದನಾಕಾರಿಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದು ರಾಜಕಾರಣವಲ್ಲ ಎಂದರು. ಇದು ಹಿಂದೂಗಳನ್ನೇ ಗುರಿಯಾಗಿಸಿ ಮಾಡಿರುವ ಕೃತ್ಯ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾನೂ ಕೂಡ ಒಬ್ಬ ಹಿಂದೂ. ನನ್ನ ಹೆಸರಿನಲ್ಲಿಯೇ ಈಶ್ವರ ಮತ್ತು ರಾಮ ಎರಡೂ ದೇವರ ಹೆಸರಿದೆ ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನ್ಯಾಯಮಂಡಳಿಯೇ ಅಣೆಕಟ್ಟನ್ನು 519 ಮೀ.ಗಳಿಂದ 524 ಮೀ.ವರೆಗೆ ಏರಿಸಲು 2010 ರಲ್ಲಿ ಹೇಳಿದೆ. 15 ವರ್ಷಗಳಾಗಿದ್ದು ರಾಜಕಾರಣಕ್ಕಾಗಿ ಆಕ್ಷೇಪ ತೆಗೆದಿದ್ದಾರೆ ಎಂದರು.
ಯಾರಾದರೂ ಮತಾಂತರಗೊಂಡಿದ್ದರೆ ಅವರ ಈಗಿನ ಜಾತಿಯನ್ನೇ ಪರಿಗಣಿಸಲಾಗುವುದು. ಮತಾಂತರವಾಗುವುದು ಬೇಡ ಎಂದರೂ ವ್ಯವಸ್ಥೆಯ ಪರಿಣಾಮವಾಗಿ ಮತಾಂತರಗೊಳ್ಳುತ್ತಾರೆ. ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಸಮಾನ ಅವಕಾಶಗಳಿದ್ದರೆ,ಏಕೆ ಮತಾಂತರಗೊಳ್ಳುತ್ತಾರೆ? ಅಸ್ಪೃಶ್ಯತೆ ಏಕೆ ಬಂತು, ಅದನ್ನು ನಾವು ಹುಟ್ಟುಹಾಕಿದ್ದೇವೆಯೇ? ಎಂದರು. ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದಲ್ಲಿ ಇದ್ದರೂ ಮತಾಂತರವಾಗಿದ್ದಾರೆ. ಅದು ಅವರ ಹಕ್ಕು ಎಂದರು.