ನ್ಯೂಸ್

ದೊಡ್ಡಬಳ್ಳಾಪುರ ಸಮಾವೇಶಕ್ಕೆ ಮೋದಿ ಬಹುತೇಕ ಖಚಿತ: ಬೊಮ್ಮಾಯಿ ಸರ್ಕಾರದ ವರ್ಷದ ಸಾಧನೆ ಸಂಭ್ರಮಾಚರಣೆ

Webdesk - Ravikanth

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಚುನಾವಣೆಗಳಿಗೆ ಭೂಮಿಕೆ ಸಿದ್ಧಪಡಿಸಲು ಉದ್ದೇಶಿತ ‘ಸಾಧನಾ ಸಮಾವೇಶ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜು.28ಕ್ಕೆ ಒಂದು ವರ್ಷ ತುಂಬಲಿದ್ದು, ಅದೇ ದಿನ ದೊಡ್ಡಬಳ್ಳಾಪುರದಲ್ಲಿ ಸಾಧನೆಯ ಸಂಭ್ರಮ ಆಚರಿಸಲು ಕಮಲಪಡೆ ಮುಂದಾಗಿದೆ. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬ ಸಂದೇಶ ರವಾನೆ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಪರ ಅಲೆ ಸೃಷ್ಟಿಸುವ ಎರಡಂಶದ ಕಾರ್ಯಸೂಚಿ ಈ ಸಮಾವೇಶದ ಹಿಂದಿದೆ.

ಬೆಂಗಳೂರು, ಮೈಸೂರಿನ ಕಾರ್ಯಕ್ರಮಗಳಲ್ಲಿ ಮೋದಿ ಇತ್ತೀಚೆಗೆ ಭಾಗಿಯಾಗಿ ಚುನಾವಣಾಪೂರ್ವ ತಯಾರಿಗಳಿಗೆ ಕಿಕ್ ಸ್ಟಾರ್ಟ್ ಮಾಡಿದ್ದರು. 2ನೇ ಹಂತದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಕೆಲಸ, ಅಭಿವೃದ್ಧಿ ನಿಲುವಿನ ಹವಾ ಸೃಷ್ಟಿಸಲು ಬರುತ್ತಿದ್ದಾರೆ. ಮೋದಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಆಹ್ವಾನ ನೀಡಿದ್ದಾರೆ. ಪ್ರಧಾನಿ ಕಚೇರಿಯು ಸಂರ್ಪಸಿ ಈ ಸಮಾವೇಶದ ಮಾಹಿತಿ ಪಡೆದುಕೊಂಡಿದೆ ಎಂದು ಮೂಲ ತಿಳಿಸಿವೆ.

ಲೆಕ್ಕಾಚಾರ, ಉತ್ಸುಕತೆ: ಮೋದಿ ಅಂದರೇನೇ ಅಭಿವೃದ್ಧಿ, ಸರ್ವರ ಏಳಿಗೆ ಎಂದು ಬಿಂಬಿಸುವುದು ಬಿಜೆಪಿ ಲೆಕ್ಕಾಚಾರ. ಪಕ್ಷದ ನೆಲೆ ಗಟ್ಟಿಯಿಲ್ಲದ ಪ್ರದೇಶದಲ್ಲಿ ಬೃಹತ್ ಸಮಾವೇಶ ಸಂಘಟಿಸಿ, ಶಕ್ತಿ ಪ್ರದರ್ಶಿಸಲು ಉತ್ಸುಕವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಆಯಕಟ್ಟಿನ ಜಾಗವನ್ನು ಗುರುತಿಸಲಾಗಿದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳನ್ನು ಕೇಂದ್ರೀಕರಿಸಿ ಒಂದು ಲಕ್ಷ ಜನರನ್ನು ಕರೆ ತರುವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಮಾವೇಶದ ಪೂರ್ವತಯಾರಿ ಸಭೆಗಳಿಗೆ ರೂಪರೇಷೆ ಸಿದ್ಧವಾಗಿದೆ. ಈ ಸಭೆಗಳಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಹಲವರು ಪ್ರವಾಸ ಮಾಡಲಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ಗೆ ಉಸ್ತುವಾರಿ ಹೊಣೆ ಒಪ್ಪಿಸಿದ್ದರೂ, ಸಮಾವೇಶ ಅಚ್ಚುಕಟ್ಟಾಗಿ ನಿರ್ವಹಣೆಗೆ ಸಾಥ್ ನೀಡುವ ತಂಡವು ರಚನೆಯಾಗಲಿದೆ.

ನಾಯಕತ್ವದ ಚರ್ಚೆಗೆ ಪೂರ್ಣ ವಿರಾಮ ಹಾಕಿ, ಈಗಿರುವ ತಂಡಕ್ಕೆ ಹುರುಪು ತುಂಬಿ ಚುನಾವಣೆಗೆ ಸಜ್ಜುಗೊಳಿಸುವುದು ಬೃಹತ್ ಸಮಾವೇಶದ ಮತ್ತೊಂದು ಗುರಿಯಾಗಿದೆ. ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ದುರ್ಬಲವಾಗಿದೆ ಎಂದು ಗುರುತಿಸಲಾಗಿದ್ದು, ಈ ದೌರ್ಬಲ್ಯ ಮೆಟ್ಟಿನಿಂತು ಮಿಷನ್ 150 ಸಂಕಲ್ಪ ಸಾಧಿಸುವುದು ವರಿಷ್ಠರ ಕಟ್ಟಪ್ಪಣೆಯಾಗಿದೆ. ಬೇರೆ ಪಕ್ಷಗಳ ಕೆಲವು ಪ್ರಭಾವಿ ನಾಯಕರು ಪಕ್ಷ ಸೇರಲು ಒಲವು ತೋರಿದ್ದಾರೆ. ಹಲವು ಸುತ್ತಿನ ನೇರ, ಪಕ್ಷದೊಳಗೆ ಚರ್ಚೆಯಾಗಿದ್ದು, ಸಮಾವೇಶದಲ್ಲಿ ಕೆಲವರನ್ನು ಸೇರಿಸಿಕೊಂಡು ಬಲ ಹೆಚ್ಚಿಸಿಕೊಳ್ಳಲು ರಾಜ್ಯ ನಾಯಕರು ಯೋಚಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷವೂ ಇಲ್ಲದೇ ಇರುವ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಮಾಡಿರುವ ಬದಲಾವಣೆ ಪಕ್ಷದ ವಲಯದಲ್ಲಿ ಅಚ್ಚರಿ ತಂದಿದೆ. ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಯಾಗಿದ್ದ ಅರುಣ್​ಕುಮಾರ್ ಅವರನ್ನು ಸಂಘಕ್ಕೆ ವಾಪಸ್ ಕರೆಸಿಕೊಂಡಿದ್ದು, ಆರ್​ಎಸ್​ಎಸ್​ನ ತುಮಕೂರು ವಿಭಾಗದ ಪ್ರಚಾರಕರಾಗಿರುವ ರಾಜೇಶ್ ರನ್ನು ರಾಜಕೀಯ ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿದೆ. ಅವರನ್ನೇ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆಗಳಿವೆ. ಅರುಣ್​ಕುಮಾರ್ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಮೂಲದವರಾದ ರಾಜೇಶ್, ವಿದ್ಯಾಭ್ಯಾಸದ ನಂತರ ಆರ್​ಎಸ್​ಎಸ್ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. 2021ರಿಂದ ತುಮಕೂರಿನಲ್ಲಿ ಪ್ರಚಾರಕರಾಗಿದ್ದಾರೆ.

ಬದಲಾವಣೆ: ಗ.ರಾ.ಸುರೇಶ್- ಸಾಮರಸ್ಯ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯರು, ಘುಮಂತು (ಅಲೆಮಾರಿ ಸಮುದಾಯ) ಕಾರ್ಯದ ಕರ್ನಾಟಕ ರಾಜ್ಯ ಪ್ರಮುಖರು; ಶಿ.ಲ. ಕೃಷ್ಣಮೂರ್ತಿ- ಹಿಂದು ಸೇವಾ ಪ್ರತಿಷ್ಠಾನ; ಮನೋಹರ ಮಠದ್- ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕರು; ಅರುಣ್​ಕುಮಾರ್- ಆರ್​ಎಸ್​ಎಸ್ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರು; ರಾಜೇಶ್- ರಾಜಕೀಯ ಕ್ಷೇತ್ರ.