ನ್ಯೂಸ್

ಭಾರತ-ಇಟಲಿ ಬಾಂಧವ್ಯವನ್ನು ಗಟ್ಟಿಗೊಳಿಸಲು ಮೋದಿ, ಮೆಲೋನಿ ಪ್ರತಿಜ್ಞೆ: ಯುಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ಚರ್ಚೆ| Narendra Modi

Narendra Modi: ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆ ಬುಧವಾರ (ಸೆಪ್ಟೆಂಬರ್,10) ರಂದು ಚರ್ಚಿಸಿದ್ದಾರೆ.

ಇಟಲಿ ಪ್ರಧಾನಿ ಜತೆ ದೂರವಾಣಿ ಕರೆಯಲ್ಲಿ ಮಾತನಾಡಿರುವ ಮೋದಿ, ಯುಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ಮಾರ್ಗಗಳ ಜೊತೆಗೆ ಭಾರತ, ಮಧ್ಯಪ್ರಾಚ್ಯ ಮತ್ತು ಯುರೋಪ್ ಆರ್ಥಿಕ ಕಾರಿಡಾರ್ (IMEEC) ಅನುಷ್ಠಾನದ ಬಗ್ಗೆಯೂ ಮೆಲೋನಿ ಅವರೊಂದಿಗೆ ಚರ್ಚಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮೋದಿ, ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆ ಅತ್ಯುತ್ತಮ ಸಂಭಾಷಣೆ ನಡೆಸಿದೆ. ಭಾರತ-ಇಟಲಿ ವ್ಯಾಪಾರ ಪಾಲುದಾರಿಕೆಯನ್ನು ಬಲಗೊಳಿಸಲು ನಮ್ಮ ಬದ್ಧತೆಯನ್ನು ನಾವು ಪುನರ್​​ ಉಚ್ಚರಿಸಿದ್ದೇವೆ. ಅಲ್ಲದೆ, ಯುಕ್ರೇನ್‌ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸುವಲ್ಲಿ ಆಸಕ್ತಿಯನ್ನು ಹಂಚಿಕೊಂಡಿದ್ದೇವೆ ಎಂದು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಮೋದಿ, ಪರಸ್ಪರ ಪ್ರಯೋಜನಕಾರಿ ಭಾರತ-ಯುರೋಪ್ ಒಕ್ಕೂಟದ ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಲು ಮತ್ತು IMEEC ಯ ಮೂಲಕ ಸಂಪರ್ಕವನ್ನು ಉತ್ತೇಜಿಸಲು ಇಟಲಿಯ ಪೂರ್ವಭಾವಿ ಬೆಂಬಲಕ್ಕಾಗಿ ಪ್ರಧಾನಿ ಮೆಲೋನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಭಾರತ ಮತ್ತು EU ಈ ವರ್ಷದ ಅಂತ್ಯದ ವೇಳೆಗೆ FTA ದೃಢೀಕರಿಸುವತ್ತ ಗಮನಹರಿಸುತ್ತಿವೆ. ಈ ವಾರ ನವದೆಹಲಿಯಲ್ಲಿ ಎರಡೂ ಕಡೆಯವರು 13 ನೇ ಸುತ್ತಿನ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಕಳೆದ ಎಂಟು ವರ್ಷಗಳ ಅಂತರದ ನಂತರ ಜೂನ್ 2022 ರಲ್ಲಿ ಭಾರತ ಮತ್ತು EU ಗಳು FTA ಬಗ್ಗೆ ಮಾತುಕತೆಗಳನ್ನು ಪುನರ್​ಆರಂಭಿಸಿದವು. (ಏಜೆನ್ಸೀಸ್)