ನ್ಯೂಸ್

ಮೋದಿ-ಜಿನ್​ಪಿಂಗ್ ಭೇಟಿ; ನವೆಂಬರ್​ 17ರಂದು ಮುಖಾಮುಖಿ

lakshmihegde

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ನವೆಂಬರ್ 17ರಂದು ನಡೆಯಲಿರುವ ಬ್ರಿಕ್ಸ್ ಶೃಂಗದ ವರ್ಚುವಲ್ ಸಭೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ನಂತರ ಉಭಯ ಮುಖಂಡರ ಮೊದಲ ಭೇಟಿ ಇದಾಗಿದೆ. ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಘಟನೆಯ ನಂತರದಲ್ಲಿನ ಮೊದಲ ಉನ್ನತ ಮಟ್ಟದ ಸಭೆಯೂ ಇದಾಗಿರುವು ದರಿಂದ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಹಿಂದಿನ ಭೇಟಿ:

  • 2014ರಿಂದ ಮೋದಿ ಮತ್ತು ಜಿನ್​ಪಿಂಗ್ ಒಟ್ಟು 18 ಬಾರಿ ಭೇಟಿಯಾಗಿದ್ದಾರೆ. 2018ರಲ್ಲಿ ವುಹಾನ್ ಮತ್ತು 2019ರಲ್ಲಿ ತಮಿಳುನಾಡಿನ ಮಹಾಬಲಿಲ್ಲಪುರಂನಲ್ಲಿ ಅನೌಪಚಾರಿಕ ಶೃಂಗಸಭೆ ನಡೆದಿತ್ತು.
  • 2019ರಲ್ಲಿ ಮೋದಿ ಪ್ರಧಾನಿಯಾಗಿ ಪುನರಾಯ್ಕೆಗೊಂಡ ನಂತರ, ಬಿಷ್ಕೆಕ್​ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ (ಎಸ್​ಸಿಒ) ಶೃಂಗ ಸಭೆಯಲ್ಲಿ ಕ್ಸಿ ಜಿನ್​ಪಿಂಗ್​ರನ್ನು ಭೇಟಿಯಾಗಿದ್ದರು.
  • 2016ರಲ್ಲಿ ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗದಲ್ಲಿ ಚೀನಾ ಅಧ್ಯಕ್ಷರು ಪಾಲ್ಗೊಂಡಿದ್ದರು. 2017ರಲ್ಲಿ ಚೀನಾದ ಕ್ಸಿಯಾಮನ್​ನಲ್ಲಿ ನಡೆದ ಶೃಂಗಸಭೆಗೆ ಮೋದಿ ತೆರಳಿದ್ದರು. ಈ ಎರಡೂ ಸಂದರ್ಭಗಳಲ್ಲಿ ಉಭಯ ಮುಖಂಡರು ದ್ವಿಪಕ್ಷೀಯ ವಿಷಯಗಳ ಕುರಿತು ಮುಖಾಮುಖಿ ಚರ್ಚೆ ನಡೆಸಿದ್ದರು.
ಸ್ಥಿರತೆ-ಭದ್ರತೆಗೆ ಪ್ರಾಶಸ್ತ್ಯ 

‘ಜಾಗತಿಕ ಸ್ಥಿರತೆ, ಭದ್ರತೆ ಮತ್ತು ನವೀನ ಬೆಳವಣಿಗೆಗಾಗಿ ಬ್ರಿಕ್ಸ್ ಪಾಲುದಾರಿಕೆ’ ಎನ್ನುವುದು 2020ರ ಶೃಂಗಸಭೆಯ ಘೋಷ ವಾಕ್ಯವಾಗಿದೆ. ರಷ್ಯಾ ಈ ಬಾರಿಯ ಬ್ರಿಕ್ಸ್ ಅಧ್ಯಕ್ಷ ದೇಶವಾಗಿದೆ. ಸದಸ್ಯ ದೇಶಗಳ ಜನತೆಯ ಜೀವನ ಮಟ್ಟ ಸುಧಾರಿಸಲು ಸಹಕರಿಸುವುದು ಉದ್ದೇಶವಾಗಿದೆ ಎಂದು ಬ್ರಿಕ್ಸ್ ಹೇಳಿಕೆ ತಿಳಿಸಿದೆ. ಕರೊನಾ ಪಿಡುಗಿನ ಕಾರಣ ವರ್ಚುವಲ್ ಮೂಲಕ ಈ ಶೃಂಗ ಸಭೆ ಆಯೋಜಿಸಲಾಗುತ್ತಿದೆ.

5 ದೇಶಗಳ ಕೂಟ

ಐದು ಪ್ರಮುಖ ಆರ್ಥಿಕತೆಗಳ ಕೂಟವೇ ಬ್ರಿಕ್ಸ್. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಸದಸ್ಯ ರಾಷ್ಟ್ರಗಳಾಗಿವೆ. 2009ರಿಂದಲೂ ಈ ದೇಶಗಳು ವಾರ್ಷಿಕ ಶೃಂಗಸಭೆ ನಡೆಸುತ್ತಿವೆ.

ಹಳಸಿದ ಬಾಂಧವ್ಯ

ಪೂರ್ವ ಲಡಾಖ್​ನ ಗಡಿ ಸಮಸ್ಯೆ ಉಂಟಾಗಿದ್ದು ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಮುಖ್ಯಸ್ಥರು ವರ್ಚುವಲ್ ಮುಖಾಮುಖಿ ಆಗಲಿರುವುದು ವಿಶೇಷ ವಿದ್ಯಮಾನವಾಗಲಿದೆ. ಸಮಸ್ಯೆ ಇತ್ಯರ್ಥಕ್ಕೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮತುಕತೆ ಸತತವಾಗಿ ನಡೆಯುತ್ತಿವೆ.