ನವದೆಹಲಿ : ಭೂತಾನ್ ಪ್ರಜೆಗಳಿಗೆ ಭಾರತದ ರುಪೇ ನೆಟ್ವರ್ಕ್ ಬಳಸಿಕೊಳ್ಳಲು ಅನುವಾಗುವಂತಹ ರುಪೇ ಕಾರ್ಡ್ ಫೇಸ್ 2 ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಲೊಟೇ ಶೆರಿಂಗ್ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಮೋದಿಯವರು ಭೂತಾನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ರುಪೇ ಫೇಸ್ ಒಂದರ ಲೋಕಾರ್ಪಣೆ ಆಗಿತ್ತು.
ಉಭಯ ರಾಷ್ಟ್ರಗಳ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧವಿದ್ದು, ಭೂತಾನ್ನ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಲು ಇಸ್ರೋ ಸಿದ್ದತೆ ನಡೆಸಿದೆ. ಇದೇ ರೀತಿ ಮೂರನೇ ಅಂತಾರಾಷ್ಟ್ರೀಯ ಇಂಟರ್ನೆಟ್ ಗೇಟ್ವೇ ಸಂಬಂಧಿಸಿದ ಒಪ್ಪಂದವನ್ನು ಭೂತಾನ್ ಬಿಎಸ್ಎನ್ಎಲ್ ಜತೆಗೆ ಮಾಡಿದೆ. ಕರೊನಾ ಸಂಕಷ್ಟದಲ್ಲೂ ಭೂತಾನ್ಗೆ ಭಾರತ ಆಸರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೊದಲ ಹಂತದ ರುಪೇ ಕಾರ್ಡ್ ನಲ್ಲಿ ಭೂತಾನ್ ಪ್ರಜೆಗಳು ಭಾರತಕ್ಕೆ ಬಂದಾಗ ಇಲ್ಲಿ ವಹಿವಾಟು ನಡೆಸುವುದಕ್ಕೆ ಅನುಕೂಲವಾಗುವಂತೆ ರೂಪಿಸಲಾಗಿತ್ತು. ಈಗ ಎರಡನೇ ಹಂತದ ರೂಪೇ ಕಾರ್ಡ್ನಲ್ಲಿ ಅವರು ಭೂತಾನದ ಕಾರ್ಡ್ ಮೂಲಕವೂ ರುಪೇ ನೆಟ್ವರ್ಕ್ನಲ್ಲಿ ವಹಿವಾಟು ನಡೆಸಬಹುದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)