ನ್ಯೂಸ್

ಪ್ರಧಾನಿಯಾಗಿ ಜೂನ್​ 08ರಂದು ನರೇಂದ್ರ ಮೋದಿ ಪ್ರಮಾಣ ವಚನ?

ನವದೆಹಲಿ: 18ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಜೂನ್​ 04ರಂದು ಹೊರಬಿದ್ದಿದ್ದು, ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮೂರನೇ ಬಾರಿಗೆ ಸರ್ಕಾರ ರಚಿಸುತ್ತಿದೆ. ದೆಹಲಿಯಲ್ಲಿ ಎನ್​ಡಿಎ ಮೈತ್ರಿಕೂಟದ ನಾಯಕರ ಸಭೆ ಕರೆಯಲಾಗಿದ್ದು, ಇದರ ನಡುವೆಯೇ ಪ್ರಧಾನಿ ಮೋದಿ ಅವರು ಜೂನ್​ 08ರಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಸುದ್ದಿ ಹೊರಬಿದ್ದಿದೆ.

ಕಳೆದ ಎರಡು ಅವಧಿ ಪ್ರಧಾನಿ ಅಭ್ಯರ್ಥಿ ಆಯ್ಕೆ ಹಾಗೂ ಸರ್ಕಾರ ರಚನೆಯು ಹೆಚ್ಚಿನ ಕಸರತ್ತು ಇಲ್ಲದೇ ಮುಗಿದು ಹೋಗಿತ್ತು. ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಮಿತ್ರಪಕ್ಷಗಳ ಅಭಿಪ್ರಾಯವನ್ನು ಕೇಳಬೇಕಿದೆ. ಇದರಿಂದಾಗಿ ರಾಜಧಾನಿ ನವದೆಹಲಿಯಲ್ಲಿ ಸರಣಿ ಸಭೆಗಳು ಶುರುವಾಗಿದ್ದು, ಇಂದು ಉಭಯ ಮಿತ್ರಕೂಟಗಳ ನಿರ್ಣಾಯಕ ಸಭೆ ನಡೆಸಿ ನೂತನ ಸರ್ಕಾರದ ದಿಕ್ಕನ್ನು ನಿರ್ಧರಿಸಲಿವೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪ್ರಧಾನಿ ಮೋದಿ ಅವರು ಜೂನ್​ 08, ಶನಿವಾರದಂದು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದ್ದು, ಅಂದೇ ಮೊದಲ ಸಚಿವ ಸಂಪುಟ ನಡೆಸಲಿದ್ದಾರೆ ಎಂದು ಉನ್ನತ ಸುದ್ದಿ ಮೂಲಗಳು ಖಚಿತಪಡಿಸಿವೆ. ಆದರೆ, ಬುಧವಾರ (ಜೂನ್ 05) ಮಿತ್ರಪಕ್ಷಗಳ ಸಭೆ ಕರೆಯಲಾಗಿದ್ದು, ಸಂಜೆ ಅಂತಿಮ ಚಿತ್ರಣ ಹೊರಬೀಳಲಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಿದೆ.

18ನೇ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಬಹುತೇಕ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಹುಸಿಯಾಗಿದ್ದು, ಅಚ್ಚರಿಯ ಫಲಿತಾಂಶ ಬಂದಿದೆ. ಸರ್ಕಾರ ರಚನೆಗೆ ಬಿಜೆಪಿ ಮತ್ತೊಮ್ಮೆ ಮೈತ್ರಿಕೂಟಕ್ಕೆ ಮಣೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೂ ಸರ್ಕಾರ ರಚನೆಯ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.