ನ್ಯೂಸ್

ಸಂಪಾದಕೀಯ | ಪೊಲೀಸ್ ವ್ಯವಸ್ಥೆ ಆಧುನೀಕರಣ

ಮೋಹನ್​ ಶೆಟ್ಟಿ

ದೇಶದಲ್ಲಿನ ಪೊಲೀಸ್ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ವ್ಯಕ್ತಪಡಿಸಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಎರಡು ದಿನಗಳ ಪೊಲೀಸ್ ಮಹಾನಿರ್ದೇಶಕರ 59ನೇ ಸಮಾವೇಶದ ಸಮಾರೋಪದಲ್ಲಿ ಮಾತನಾಡಿರುವ ಪ್ರಧಾನಿ, ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ, ಡೀಪ್​ಫೇಕ್ ವಿಡಿಯೋಗಳಿಂದ ಉಂಟಾಗಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಮತ್ತು ಕೌಟುಂಬಿಕ ಬಾಂಧ್ಯವಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಡೀಪ್​ಫೇಕ್ ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಗಮನಾರ್ಹವೆಂದರೆ, ಪ್ರಧಾನಿ ನರೇಂದ್ರ ಮೋದಿ ಈ ಮುನ್ನ ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ಮತ್ತು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ದೀಪಾವಳಿ ಸಮಾರಂಭದಲ್ಲಿ ಕೂಡ ಈ ವಿಷಯ ಪ್ರಸ್ತಾಪಿಸಿದ್ದರು ಮತ್ತು ‘ಡೀಪ್​ಫೇಕ್​ಗಳು ನಮ್ಮಂತಹ ವೈವಿಧ್ಯಮಯ ಸಮಾಜದಲ್ಲಿ ಅಸಮಾಧಾನದ ಕಿಡಿಯನ್ನು ಹೊತ್ತಿಸಬಹುದು’ ಎಂದಿದ್ದರು. ತಂತ್ರಜ್ಞಾನದ ಕೆಡುಕಿನ ಪರಿಣಾಮವನ್ನು ಪ್ರಧಾನಿ ತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟ. ಅಲ್ಲದೆ, ಈ ನಿಟ್ಟಿನಲ್ಲಿ ಪರಿಹಾರದ ದಾರಿಯನ್ನೂ ಸೂಚಿಸಿರುವ ಅವರು, ದೇಶದ ಪೊಲೀಸರನ್ನು ತಂತ್ರಜ್ಞಾನ ವಿಷಯದಲ್ಲಿ ಮತ್ತಷ್ಟು ಸಜ್ಜುಗೊಳಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಸ ಬಗೆಯ ಅಪರಾಧಗಳು ಆತಂಕ ಸೃಷ್ಟಿಸಿವೆ. ಪೊಲೀಸ್ ಇಲಾಖೆ ಇದರ ವಿರುದ್ಧ ಹೋರಾಡುತ್ತಿದೆಯಾದರೂ, ಮತ್ತಷ್ಟು ತಂತ್ರಜ್ಞಾನಸ್ನೇಹಿ ಆಗಬೇಕಿದೆ. ವಂಚನೆ, ಮೋಸ, ಕನ್ನ, ಲೂಟಿಯಂಥ ಘಟನೆಗಳು ಈಗ ಆನ್​ಲೈನ್ ಮೂಲಕ ನಡೆಯುತ್ತಿದ್ದು, ಆನ್​ಲೈನ್ ಕಾವಲು ಹೆಚ್ಚಿಸಲು ತಂತ್ರಜ್ಞಾನದ ಮೊರೆ ಹೋಗಬೇಕಿದೆ. ಜನರಲ್ಲೂ ಈ ಬಗ್ಗೆ ಜಾಗೃತಿ ಹೆಚ್ಚಿಸಬೇಕಿದೆ. ಆದರೆ, ವಾಸ್ತವ ಎಂದರೆ ಡಿಜಿಟಲ್ ಬಂಧನ ಅಥವಾ ಡೀಪ್​ಫೇಕ್​ನಂಥ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ತಂತ್ರಜ್ಞಾನವನ್ನು ಇಲಾಖೆಯಲ್ಲಿ ಸಮರ್ಪಕವಾಗಿ ಅಳವಡಿಸದಿರುವುದು, ಈ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡದಿರುವುದು.

ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಆನ್​ಲೈನ್ ಕುರಿತಾದ ಇಂಥ ವಿಷಯಗಳನ್ನು ಪರಿಶೀಲಿಸಲು ಜನರ ಬಳಿ ಯಾವುದೇ ವಿಧಾನಗಳು ಇಲ್ಲ. ಆದರೆ, ಪೊಲೀಸ್ ಇಲಾಖೆ ಇದೇ ಅಸಹಾಯಕತೆಯನ್ನು ವ್ಯಕ್ತಪಡಿಸಿದರೆ ಹೇಗೆ? ಪೊಲೀಸ್ ಇಲಾಖೆ ಸ್ಮಾರ್ಟ್ ಆಗಬೇಕಿದೆ. ತಂತ್ರಜ್ಞಾನದ ಬಲದಿಂದಲೇ ಇಂಥ ಕೆಡುಕಿನ ವಿರುದ್ಧ ಹೋರಾಡಲು ವ್ಯವಸ್ಥೆಯನ್ನು ಸನ್ನದ್ಧಗೊಳಿಸಬೇಕಿದೆ. ಈ ದಿಸೆಯಲ್ಲಿ ಎಷ್ಟು ಬೇಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಪ್ರವೃತ್ತವಾಗುತ್ತವೋ ಅಷ್ಟು ಒಳ್ಳೆಯದು. ಅಲ್ಲದೆ, ಇಂಥ ಗಂಭೀರ ವಿಷಯದಲ್ಲಾದರೂ ರಾಜ್ಯಗಳು ಕೇಂದ್ರದ ಜತೆಗೆ ಸಮನ್ವಯದಿಂದ ವರ್ತಿಸಬೇಕು. ರಾಜ್ಯ ಪೊಲೀಸ್ ಇಲಾಖೆಗಳ ನಡುವೆಯೂ ಸಂಪರ್ಕ ಸೇತುವೆ ಬಲಗೊಂಡು, ಮಾಹಿತಿ ವಿನಿಮಯ, ತಂತ್ರಜ್ಞಾನ ವಿನಿಮಯ ಸರಳಗೊಳ್ಳಬೇಕು. ಈ ಮೂಲಕ ಅಪರಾಧಗಳ ವಿರುದ್ಧ ಪ್ರಬಲವಾಗಿ ಹೋರಾಡಬೇಕು. ಪ್ರಧಾನಿಯವರು ಮತ್ತೆ ಮತ್ತೆ ಹೊಸ ಸವಾಲುಗಳ ಬಗ್ಗೆ ಎಚ್ಚರಿಸುತ್ತಿದ್ದು, ಪೊಲೀಸ್ ವ್ಯವಸ್ಥೆ ಎಚ್ಚೆತ್ತುಕೊಂಡು, ಆಧುನೀಕರಣಗೊಳ್ಳಲು ಇದು ಸಕಾಲ.