ನ್ಯೂಸ್

ಕರೊನಾ ಲಸಿಕೆ ಬೆಲೆ ನಿಗದಿ ಪಡಿಸಿದ ಅಮೆರಿಕದ ಮಾಡೆರ್ನಾ; ಬಡವರು ಕೊಳ್ಳೋದು ಕಷ್ಟ...!

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ, ಮಾನವರ ಮೇಲೆ ಮೂರನೇ ಹಂತದ ಪ್ರಯೋಗ ನಡೆಸಿರುವ ಅಮೆರಿಕದ ಮಾಡೆರ್ನಾ ಕಂಪನಿ ಔಷಧದ ಬೆಲೆ ನಿಗದಿ ಪಡಿಸಿದೆ.

ಅಮೆರಿಕ ಇತರ ಕಂಪನಿಗಳ ಜತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಹೋಲಿಸಿದಲ್ಲಿ ಇದು ಅಂದಾಜು ಎರಡುಪಟ್ಟು ಹೆಚ್ಚಾಗಿದೆ. ಹೀಗಿದ್ದರೂ ತನ್ನದು ನ್ಯಾಯಯುತ ಬೆಲೆಯಾಗಿದೆ ಎಂದು ಮಾಡೆರ್ನಾ ಹೇಳಿಕೊಂಡಿದೆ.

ಕೆಲ ರಾಷ್ಟ್ರಗಳಿಗೆ ಅಥವಾ ಗ್ರಾಹಕರಿಗೆ 'ಸಂಕಷ್ಟದ ಸಮಯ'ದ ಬೆಲೆಯಲ್ಲಿ ನೀಡಲು ಸಿದ್ಧವಿರುವುದಾಗಿ ತಿಳಿಸಿದೆ. ಇದರ ಪ್ರಕಾರ ಪ್ರತಿ ಡೋಸ್​ಗೆ 2,400 ರೂ.ಗಳಿಂದ 2,800 ರೂ.ವರೆಗೆ ನಿಗದಿಪಡಿಸಿದೆ.

ವಿಶ್ವಸಂಸ್ಥೆ ಪ್ರಕಾರ ಸಾಂಕ್ರಾಮಿಕ ರೋಗದ ಸಂಕಷ್ಟದಲ್ಲಿದ್ದೇವೆ. ಲಸಿಕೆ ಇಲ್ಲದೇ ಅಥವಾ ಪ್ರತಿರೋಧ ಶಕ್ತಿ ಹೆಚ್ಚಾಗದೇ ಇದು ನಮ್ಮಿಂದ ದೂರಾಗದು. ಕೊಳ್ಳುವ ಶಕ್ತಿ ಇಲ್ಲದಿದ್ದಾಗ್ಯೂ ಪ್ರತಿಯೊಬ್ಬರಿಗೆ ಲಸಿಕೆ ದೊರೆಯುವಂತಾಗಲು ಜಗತ್ತಿನ ವಿವಿಧ ದೇಶಗಳ ಸರ್ಕಾರಗಳ ಜತೆ ಮಾತುಕತೆಯಲ್ಲಿದ್ದೇವೆ ಎಂದು ಮಾಡೆರ್ನಾ ಸಿಇಒ ಸೇಫನ್​ ಬ್ಯಾನ್ಸೆಲ್​ ಹೇಳಿದ್ದಾರೆ.

ಕರೊನಾ ಸಂಕಷ್ಟದ ಈ ಸಮಯದಲ್ಲಿ ಲಸಿಕೆ ಬೆಲೆಯನ್ನು ಅದರ ಮೌಲ್ಯಕ್ಕಿಂತ ಕಡಿಮೆಗೆ ನಿಗದಿ ಮಾಡಲಾಗುವುದು. ನಿಯಂತ್ರಣಕ್ಕೆ ಬಂದ ಮೇಲೆ ಅದರ ನಿಗದಿತ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ಅಮೆರಿಕ ಮಾಡೆರ್ನಾ ಕಂಪನಿಗೆ ಭಾರಿ ಪ್ರಮಾಣದಲ್ಲಿ ಹಣಕಾಸು ನೆರವು ನೀಡಿದ್ದಲ್ಲದೇ, ಖರೀದಿ ಒಪ್ಪಂದ ಮಾಡಿಕೊಂಡಿದೆ. ಇತರ ಕಂಪನಿಗಳು 1,500 ರೂ.ಗೂ ಕಡಿಮೆ ಬೆಲೆಯಲ್ಲಿ ಲಸಿಕೆ ಪೂರೈಸುವುದಾಗಿ ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡಿವೆ.

ಸದ್ಯ ಅಮೆರಿಕದ 100ಕ್ಕೂ ಅಧಿಕ ಸ್ಥಳಗಳಲ್ಲಿ ಮಾಡೆರ್ನಾ ಕಂಪನಿ 30 ಸಾವಿರಕ್ಕೂ ಅಧಿಕ ಜನರ ಮೇಲೆ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿದೆ. ಅಕ್ಟೋಬರ್​ ಅಂತ್ಯದ ವೇಳೆಗೆ ಲಸಿಕೆ ಬಿಡುಗಡೆಗೊಳಿಸುವ ಆಶಾಭಾವ ಹೊಂದಿದೆ. ಮಾಡೆರ್ನಾ ಕಂಪನಿಗೆ ವಿವಿಧ ದೇಶಗಳು 3,500 ಕೋಟಿ ರೂ. ಗೂ ಅಧಿಕ ಮೊತ್ತ ನೀಡಿ ಲಸಿಕೆಗಾಗಿ ಕಾಯುತ್ತಿವೆ.