ಜಲವೇ ಜೀವನ. ಈ ಮಾತನ್ನು ಹಿರಿಯರು, ಹಿಂದಿನ ಆಳುಗರು ಅಕ್ಷರಶಃ ಅನುಷ್ಠಾನಕ್ಕೆ ತಂದಿದ್ದರ ಫಲವಾಗಿಯೇ ಕರುನಾಡು ಜಲಸಮೃದ್ಧಿ ಹೊಂದಿರುವುದು ಮಾತ್ರವಲ್ಲ, ಜಲ ನಿರ್ವಹಣೆಯಲ್ಲೂ ಮಾದರಿ ರಾಜ್ಯವಾಗಿ ಹೊಮ್ಮಿದೆ. ನೀರಲ್ಲಿ ದೇವತಾಭಾವವನ್ನು ಕಾಣುವ ಮೂಲಕ, ಜಲ ನಮ್ಮ ಬದುಕಿಗೆ ಮಾಡುವ ಉಪಕಾರವನ್ನು ಸ್ಮರಿಸಲಾಗಿದೆ. ಪಟ್ಟಣಗಳನ್ನು ರೂಪಿಸುವಾಗ, ನಾಗರಿಕತೆ ವಿಕಸನಗೊಳ್ಳುವಾಗ ಜಲಸಂಸ್ಕೃತಿಗೆ ವಿಶೇಷ ಪ್ರಾಧಾನ್ಯ ನೀಡಲಾಗಿದೆ. ರಾಜರು, ಸಿರಿವಂತರು, ಶ್ರೀಸಾಮಾನ್ಯರು ನಿರ್ವಿುಸಿದ ಕೆರೆ ಮತ್ತು ಕಲ್ಯಾಣಿಗಳು ಇಂದಿಗೂ ಜನರನ್ನು ಪೊರೆಯುತ್ತಿವೆ. ಜಲ ಸಂರಕ್ಷಣೆಯ ಪಾರಂಪರಿಕ ಜ್ಞಾನಕ್ಕೆ ಇದು ಉತ್ತಮ ಉದಾಹರಣೆ.
ಸಾಗಿ ಬಂದ ಹಾದಿ: ಕನ್ನಡದ ಮೊದಲ ದೊರೆ ಮಯೂರವರ್ಮನಿಂದ ಹಿಡಿದು ಮೈಸೂರಿನ ಮಹಾರಾಜರವರೆಗೆ ಎಲ್ಲರೂ ಕೆರೆಗಳನ್ನು ಕಟ್ಟಿಸಿದ್ದಾರೆ. ಮಾತ್ರವಲ್ಲ, ಶ್ರೀಸಾಮಾನ್ಯರು ಕೆರೆಗಳನ್ನು ಕಟ್ಟಿಸಿದ ಆದರ್ಶ ನಿದರ್ಶನಗಳಿವೆ. ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯದೇವನ ಸಾಮಂತನಾಗಿದ್ದ ಬಯಕಾರ ರಾಮಪ್ಪ ಅಮ್ಮಸಮುದ್ರಂ, ವೀರಸಮುದ್ರಂ, ವೆಂಕಟೇಂದ್ರ ಸಮುದ್ರಂನಂತಹ ವಿಸ್ತಾರವಾದ 16 ಕೆರೆಗಳನ್ನು ಕಟ್ಟಿಸಿದ್ದ. ಏಷ್ಯಾದಲ್ಲೇ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ಚೆನ್ನಗಿರಿಯ ಸೂಳೆಕೆರೆ 40 ಹಳ್ಳಿಗಳಿಗೆ ನೀರುಣಿಸುತ್ತಿದೆ. ಮುಮ್ಮಡಿ ಕೃಷ್ಣರಾಜ ಒಡೆಯರು ಕೃಷಿಭೂಮಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ಮೈಸೂರಿನಲ್ಲಿ ಕುಕ್ಕರಹಳ್ಳಿ ಕೆರೆಯನ್ನು ಕಟ್ಟಿಸಿದರು. ಕ್ರಿ.ಶ 1853-54ರ ಅವಧಿಯಲ್ಲಿ 27,269 ಚದರ ಮೈಲಿ ಕ್ಷೇತ್ರದ ಮೈಸೂರು ರಾಜ್ಯದಲ್ಲಿ 36,265 ಕೆರೆಗಳಿದ್ದವು. ದೊಡ್ಡ ಕೆರೆಗಳು ನೀರಾವರಿ ವ್ಯವಸ್ಥೆ ಮೂಲಕ ಬೇಸಾಯಕ್ಕೆ ಆಧಾರವಾಗಿದ್ದವು. ಕಾಲ-ಕಾಲಕ್ಕೆ ಪ್ರಮುಖ ಕೆರೆಗಳನ್ನು ಜೀಣೋದ್ಧಾರ ಮಾಡಿಕೊಂಡು ಬರಲಾಗಿತ್ತು. ಬೆಳಗಾವಿಯ ಕೋಟೆ ಕೆರೆ, ಹುಬ್ಬಳ್ಳಿ-ಧಾರವಾಡದ ಉಣಕಲ್ ಕೆರೆ, ಮೈಸೂರಿನ ಕಾರಂಜಿಕೆರೆ ಬೀದರಿನ ಬ್ಲಾಕ್ಬಕ್ ಕೆರೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳೂ ಆಗಿವೆ. ಅಲ್ಲದೆ, ಮುದಗದ ಕೆರೆ (ಕಡೂರು), ತೊಣೂನಣರು ಕೆರೆ (ಪಾಂಡವಪುರ), ಹೈರಿಗೆ ಕೆರೆ (ಹುಣಸೂರು), ರಾಮಸಮುದ್ರ ಕೆರೆ (ಚಿಕ್ಕಬಳ್ಳಾಪುರ), ಭೈರಸಾಗರ ಕೆರೆ (ಗುಡಿಬಂಡೆ), ಕಳ್ಳಂಬೆಳ್ಳ ಕೆರೆ (ಶಿರಾ), ಬೈರಮಂಗಲ ಕೆರೆ (ಬಿಡದಿ) ರಾಜ್ಯದ ದೊಡ್ಡ ಕೆರೆಗಳು ಎಂದು ಖ್ಯಾತಿ ಪಡೆದಿವೆ. ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 20 ದೊಡ್ಡ ಕೆರೆಗಳಿದ್ದು, ಹಸಿರನ್ನು ಹರಡುತ್ತಿವೆ.
ಕೆರೆಗಳ ನಗರಿ ಬೆಂಗಳೂರು..: ಬೆಂಗಳೂರಿನ ನಿರ್ವಪಕ, ಕೆಂಪೇಗೌಡರು, ನಗರದ ಜನರ ನೀರಿನ ಸೌಕರ್ಯಕ್ಕಾಗಿ, ಬೆಂಗಳೂರಿನ ಸುತ್ತಮುತ್ತ ಅನೇಕ ಕೆರೆ-ಕಟ್ಟೆಗಳನ್ನು ಕಟ್ಟಿಸಿದರು. ಧರ್ವಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಕಾರಂಜೆ ಕೆರೆ, ಚನ್ನಮ್ಮ ಕೆರೆ, ಸಂಪಂಗಿ ಕೆರೆ ಈ ಪೈಕಿ ಪ್ರಮುಖವಾದವು. 1958ರಲ್ಲಿ ಪಂಚವಾರ್ಷಿಕ ಯೋಜನೆಗಳ ಸಮಿತಿಯ ವರದಿ ಪ್ರಕಾರ ಬೆಂಗಳೂರಿನಲ್ಲಿ ದೊಡ್ಡ ಮತ್ತು ಸಣ್ಣ ಕೆರೆಗಳು ಸೇರಿ ಒಟ್ಟು 1,787 ಕೆರೆಗಳಿದ್ದವು. ಇವುಗಳ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ 79,227 ಎಕರೆಗಳಷ್ಟಿತ್ತು. ಹಲಸೂರು ಕೆರೆ, ಸ್ಯಾಂಕಿ ಟ್ಯಾಂಕ್, ಲಾಲಬಾಗ್ ಕೆರೆ, ಹೆಸರಘಟ್ಟ ಕೆರೆ, ಆವತಿ ಕೆರೆಗಳು ವಾಯುವಿಹಾರಿಗಳ ನೆಚ್ಚಿನ ತಾಣಗಳಾಗಿವೆ. ಸಾವಿರಾರು ಕೆರೆಗಳನ್ನು ಹೊಂದಿದ್ದ ಬೆಂಗಳೂರು ಪ್ರಸ್ತುತ 850ಕ್ಕೂ ಅಧಿಕ ಕೆರೆಗಳನ್ನು ಹೊಂದಿದೆ.
ಕಲ್ಯಾಣಿ: ನೀರು ಸಂಗ್ರಹಣೆ ಮತ್ತು ನೀರಾವರಿಗಾಗಿ ಕಲ್ಯಾಣಿಗಳನ್ನು ನಿರ್ವಿುಸಿಕೊಂಡು ಬರಲಾಗಿದೆ. ಇವುಗಳನ್ನು ಪುಷ್ಕರಣಿ ಎಂದೂ ಕರೆಯುತ್ತಾರೆ. ಬಾಗಲಕೋಟೆಯ ಬೀಳಗಿಯಲ್ಲಿ 1708ರಲ್ಲಿ ನಿರ್ವಣಗೊಂಡ ಆರೆತ್ತಿನ ಬಾವಿ ಎಂಬ ವಿಶಾಲವಾದ ಕಲ್ಯಾಣಿ ಇದೆ. ಇದು 400ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿದೆ. ಗದಗಿನ ಪ್ರಸಿದ್ಧ ವೀರನಾರಾಯಣ ದೇವಾಲಯದ ಬಳಿ ಇರುವ ಕೊನೇರಿ ಹೊಂಡ ಎಂಬ ಕಲ್ಯಾಣಿ ಪ್ರಾಚೀನವಾದದ್ದು. ಗದಗಿನ ಲಕ್ಕುಂಡಿಯಂತೂ ಕಲ್ಯಾಣಿಗಳಿಗೆ ಪ್ರಸಿದ್ಧಿ ಹೊಂದಿದ್ದು, ನೂರಕ್ಕೂ ಹೆಚ್ಚು ಕಲ್ಯಾಣಿಗಳನ್ನು ಹೊಂದಿದೆ. ಅದೇ ರೀತಿ, ಹುಬ್ಬಳ್ಳಿಯಲ್ಲಿ 300 ವರ್ಷಕ್ಕೂ ಹಳೆಯದಾದ ಕಪಿಲಾ ಬಾವಿ ಎಂಬ ಕಲ್ಯಾಣಿ ಇದೆ. ಕರುನಾಡಿನ ಜನರು ಜಲಸಂರಕ್ಷಣೆ ಮತ್ತು ಜಲಸಂಗ್ರಹದಲ್ಲಿ ಎಷ್ಟು ಕಾಳಜಿ ಹೊಂದಿದ್ದರು ಎಂಬುದಕ್ಕೆ ಈ ಜಲಪ್ರಜ್ಞೆಯೇ ಸಾಕ್ಷಿ.
ಅಮೃತ ಸರೋವರ...: ಸ್ವಾತಂತ್ರ್ಯ ಪ್ರಾಪ್ತಿಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ‘ಅಮೃತ ಸರೋವರ’ ಯೋಜನೆಯಡಿ ಕರ್ನಾಟಕದಲ್ಲಿ 644 ಹೊಸ ಕೆರೆಗಳನ್ನು ನಿರ್ವಿುಸಿದೆ. ಈ ಮೂಲಕ 11 ಸಾವಿರ ಎಕರೆ ಪ್ರದೇಶದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಕ್ಯೂಬಿಕ್ ಮೀಟರ್ ನೀರನ್ನು ಸಂಗ್ರಹಿಸಲಾಗಿದೆ. ಬೆಳಗಾವಿ ಜಿಲ್ಲೆಯ 493 ಎಕರೆ ಪ್ರದೇಶದಲ್ಲಿ 75 ಕೆರೆಗಳನ್ನು, ಹಾಸನದಲ್ಲಿ 60, ಶಿವಮೊಗ್ಗದಲ್ಲಿ 42, ಕೋಲಾರದಲ್ಲಿ 41, ಮೈಸೂರಿನಲ್ಲಿ 37 ಕೆರೆಗಳನ್ನು ನಿರ್ವಿುಸಲಾಗಿದೆ.
40 ಸಾವಿರಕ್ಕೂ ಅಧಿಕ ಕೆರೆ: ಸರ್ಕಾರದ ಅಂಕಿಸಂಖ್ಯೆಗಳ ಪ್ರಕಾರ ಕರ್ನಾಟಕದಲ್ಲಿ ಪ್ರಸ್ತುತ 40 ಸಾವಿರಕ್ಕೂ ಅಧಿಕ ಕೆರಗಳಿದ್ದು, ನೂರಾರು ಬಗೆಯ ಪಕ್ಷಿಗಳಿಗೆ ಆಶ್ರಯತಾಣವಾಗಿವೆ.