ನೋಯ್ಡಾ: ಫ್ಯಾಷನ್ ಶೋ ನಡೆಯುತ್ತಿರುವ ವೇಳೆ ಸಂಭವಿಸಿದ ದುರಂತದಿಂದಾಗಿ ಮಾಡೆಲ್ವೊಬ್ಬಳು ಮೃತಪಟ್ಟಿರುವ ಘಟನೆ ನೋಯ್ಡಾದ ಫಿಲ್ಮ ಸಿಟಿಯಲ್ಲಿ ನಡೆದಿದೆ.
ವಂಶಿಕಾ ಚೋಪ್ರಾ(24) ಮೃತಪಟ್ಟ ದುರ್ದೈವಿಯಾಗಿದ್ದು, ಬಾಬಿ ರಾಜ್ ಎಂಬ ವ್ಯಕ್ತಿ ಭೀಕರವಾಗಿ ಗಾಯಗೊಂಡಿದ್ದಾನೆ.
ಘಟನೆ ನಡೆದದ್ದು ಹೇಗೆ?
ಪ್ಯಾಷನ್ ಶೋ ನಡೆಯುತ್ತಿರುವ ವೇಳೆ ವಂಶಿಕಾ ರ್ಯಾಂಪ್ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೆಳಕಿನ ಉದ್ದೇಶಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಕಂಬ ಮಾಡೆಲ್ ಹಾಗೂ ಬಾಬಿ ರಾಜ್ ಮೇಲೆ ಬಿದ್ದಿದೆ. ಇದರಿಂದಾಗಿ ವಂಶಿಕಾ ಸ್ಥಳದಲ್ಲೇ ಮೃತಪಟ್ಟರೆ, ಬಾಬಿ ಭೀಕರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ನೋಯ್ಡಾದ ಹೆಚ್ಚುವರಿ ಡಿಸಿಪಿ, ಪ್ಯಾಷನ್ ಶೋ ಆಯೋಜಕರು ಹಾಗೂ ಲೈಟಿಂಗ್ ವಿಭಾಗದಲ್ಲಿ ತೊಡಗಿದ್ದ ನಾಲ್ಕು ಜನರನ್ನು ಬಂಧಿಸಿದ್ದು, ಅನುಮತಿಯನ್ನು ಪಡೆಯದೇ ಈ ಪ್ಯಾಷನ್ ಶೋ ನಡೆಸಲಾಗಿತ್ತು ಎಂದಿದ್ದಾರೆ.(ಏಜೆನ್ಸೀಸ್)