ನ್ಯೂಸ್

ಮೊಬೈಲ್​ ಗೀಳು ಅಂಟಿಸಿಕೊಂಡಿದ್ದ ಬಾಲಕಿ ಕೆರೆಗೆ ಹಾರವಾದಳು!

ಹಾಸನ: ಮೊಬೈಲ್​ ಗೀಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಓದಿನತ್ತ ಗಮನಕೊಡು, ಮೊಬೈಲ್ ಬಳಸಬೇಡ ಎಂದು ಪಾಲಕರು ಬುದ್ಧಿಮಾತು ಹೇಳಿದ್ದಕ್ಕೆ ನೊಂದುಕೊಂಡ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಗೌರಿಕೊಪ್ಪಲು ನಿವಾಸಿ ರಾಮಕೃಷ್ಣ ಅವರ ಪುತ್ರಿ ರಾಣಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಈಕೆಗೆ ಮೊಬೈಲ್​ ಬಳಸದಂತೆ ಪಾಲಕರು ತಾಕೀತು ಮಾಡಿದ್ದರು. ಇಷ್ಟಕ್ಕೆ ಜಿಗುಪ್ಸೆಗೊಂಡ ಬಾಲಕಿ ಸೋಮವಾರ ರಾತ್ರಿ ಸತ್ಯವಂಗಲ ಕೆರೆಗೆ ಹಾರಿದ್ದಾಳೆ. ಸಾರ್ವಜನಿಕರು ಮಂಗಳವಾರ ಬೆಳಗ್ಗೆ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಬಡಾವಣೆ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಿಮ್ಸ್ ಗೆ ರವಾನಿಸಿದರು.

ಮೊಬೈಲ್​ ವಿಚಾರವಾಗಿ ಅದೇ ದಿನ (ಮೇ 18) ಮತ್ತೊಂದು ಪ್ರಕರಣದಲ್ಲಿ ಬಸವಕಲ್ಯಾಣದ ರಾಜೇಶ್ವರ ಗ್ರಾಮದ ಬಾಲಕ ರಾಹುಲ್ ವಿಶ್ವನಾಥ (17) ಆತ್ಮಹತ್ಯೆ ಮಾಡಿಕೊಂಡಿದ್ದ. ಪಾಲಕರಿಗೆ ಒಬ್ಬನೇ ಮಗನಾಗಿದ್ದ ಈತ ಮೊಬೈಲ್ ಗುಂಗಿನಲ್ಲೇ ಇರುತ್ತಿದ್ದ. ಇದರಿಂದ ದೂರ ಇರುವಂತೆ ಎಷ್ಟೇ ಬುದ್ಧಿ ಹೇಳಿದರೂ ಕೇಳದ ಮಗನಿಗೆ ಪಾಲಕರು ಬೈದಿದ್ದರು. ಇಷ್ಟಕ್ಕೇ ಕೋಪಗೊಂಡು ಕೋಣೆಗೆ ಹೋಗಿ ನೇಣು ಬಿಗಿದುಕೊಂಡಿದ್ದ.

ಹುಳಿಪೆಟ್ಟು ಬೀಳದ ಹೊರತು ಕಲ್ಲು ಕೂಡ ಶಿಲೆಯಾಗುವುದಿಲ್ಲ. ಪಾಲಕರ ಬುದ್ಧಿಮಾತಿನ ಹಿಂದೆ ಮಕ್ಕಳ ಒಳಿತಿನ ತುಡಿತ ಇರುತ್ತದೆ. ಇದನ್ನರಿಯದ ಕೆಲ ಮಕ್ಕಳು ಬದುಕನ್ನೇ ಅಂತ್ಯ ಕಾಣಿಸಿಕೊಳ್ಳುತ್ತಿರುವುದು ದುರಂತ.