ಬೆಂಗಳೂರು: ಮುಕ್ತ ಮಾರುಕಟ್ಟೆ, ಸ್ಪರ್ಧಾತ್ಮಕ ದರ ಹಾಗೂ ರೈತರ ಆದಾಯ ಪುನಶ್ಚೇತನ ಇತ್ಯಾದಿ ಅನುಕೂಲಕರ ಅಂಶಗಳನ್ನು ಮುಂದಿಟ್ಟು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಮಾದರಿ ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರದ ಉತ್ಸುಕತೆ, ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದು ರೈತಾಪಿ ವರ್ಗ, ವರ್ತಕರ ವಲಯದಲ್ಲಿ ಸಂಶಯ ಹುಟ್ಟಿಹಾಕಿದೆ.
ರಾಷ್ಟ್ರೀಯ ನೀತಿ ಆಯೋಗದ ನಿರ್ದೇಶಕರ ಆಡಳಿತ ಮಂಡಳಿ ತೀರ್ವನದಂತೆ ಎಲ್ಲ ರಾಜ್ಯಗಳಲ್ಲಿ ಎಪಿಎಂಸಿ ಮಾದರಿ ಕಾಯ್ದೆ ಅನುಷ್ಠಾನಕ್ಕೆ ಆಸಕ್ತಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಕೃಷಿ, ರೈತ ಕಲ್ಯಾಣ ಹಾಗೂ ಸಹಕಾರ ಮಂತ್ರಾಲಯ ಮೇ 5ರಂದು ರಾಜ್ಯಕ್ಕೆ ಬರೆದ ಪತ್ರದಲ್ಲಿ ನೀಡಿದ ‘ಸುಗ್ರೀವಾಜ್ಞೆ’ ಸೂಚನೆ ವಿವಾದದ ಕಿಡಿ ಹೊತ್ತಿಸಿದೆ. ಮಾರಕ ಪಿಡುಗಿನ ಸಂಕಷ್ಟ, ಲಾಕ್ಡೌನ್ನಿಂದಾಗಿ ಅನ್ನದಾತರು ತತ್ತರಿಸಿರುವ ಹೊತ್ತಿನಲ್ಲಿ ಮಹತ್ವದ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ಮುಂದಾಗಿದ್ದು, ಇಂಥ ಧಾವಂತದ ಔಚಿತ್ಯವೇನು? ಎಂದು ರೈತರು, ರೈತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಮಾದರಿ ಕಾಯ್ದೆ ಉದ್ದೇಶ: ಕೃಷಿ ಉತ್ಪನ್ನಗಳ ಖರೀದಿ- ಮಾರಾಟದ ಮೇಲಿರುವ ನಿಯಂತ್ರಣ ವ್ಯವಸ್ಥೆ ತೆಗೆದು ಹಾಕಿ ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸುವುದು. ಇದರಿಂದ ಸ್ಪರ್ಧಾತ್ಮಕ ದರ ಲಭಿಸಿ ರೈತರ ಆದಾಯದಲ್ಲಿ ವೃದ್ಧಿ, ಹೆಚ್ಚುವರಿ ಉತ್ಪನ್ನಗಳ ಪರಿಣಾಮಕಾರಿ ನಿರ್ವಹಣೆ ಸಾಧ್ಯವೆಂಬ ಅಂಶಗಳು ಮೇಲ್ನೋಟಕ್ಕೆ ಗೊತ್ತಾಗಿದ್ದು, ಮಾದರಿ ಕಾಯ್ದೆಯ ವಿಸõತ ಸ್ವರೂಪ ಹೊರ ಬಿದ್ದಿಲ್ಲ.
ಆತಂಕವೇನು?: ರಾಜ್ಯದ ಎಪಿಎಂಸಿ ನಿಯಂತ್ರಣ ಕಾಯ್ದೆಯು 177 ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆಗಳಲ್ಲಿ ರೈತರು, ವರ್ತಕ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿದ್ದು, ಕೆಲವು ಲೋಪಗಳಿದ್ದರೂ ಮಾರುಕಟ್ಟೆ ಶಿಸ್ತು ಮತ್ತು ಸರ್ಕಾರದ ಹಿಡಿತ ಸಾಧಿಸಲು ನೆರವಾಗಿದೆ. ಜತೆಗೆ ಸಂಸ್ಕರಿತ ಆಹಾರ ಧಾನ್ಯ ಖರೀದಿಸುತ್ತಿರುವ ವರ್ತಕರು ಶೇ.15 ಶುಲ್ಕ ಭರಿಸುತ್ತಾರೆ. ಸದ್ಯ ಪ್ರಸ್ತಾವಿತ ಕೇಂದ್ರದ ಮಾದರಿ ಕಾಯ್ದೆ ಜಾರಿಯಾದರೆ ಇದೆಲ್ಲವೂ ತಪ್ಪಿ ಹೋಗಲಿದೆ.
ನೇರ ವಿದೇಶಿ ಬಂಡವಾಳ ಹೂಡಿಕೆ, ಬಹುರಾಷ್ಟ್ರೀಯ ಕಾಪೋರೇಟ್ ಕಂಪನಿ (ಎಂಎನ್ಸಿ)ಗಳು ಈಗಾಗಲೆ ಚಿಲ್ಲರೆ ಮಾರುಕಟ್ಟೆ ಮೇಲೆ ದಾಳಿಯಿಟ್ಟಿದ್ದು, ಕೃಷಿ ಉತ್ಪನ್ನಗಳ ವಹಿವಾಟನ್ನು ಏಜೆಂಟರ ಮೂಲಕ ವಶಪಡಿಸಿಕೊಳ್ಳಲಿವೆ. ಮಾರುಕಟ್ಟೆ ಶಿಸ್ತು ಹಾಗೂ ಸರ್ಕಾರದ ನಿಯಂತ್ರಣ ಕೈಬಿಟ್ಟು ಹೋಗಲಿದ್ದು, ರೈತರು ಮೋಸ ಹೋಗುವ ಸಾಧ್ಯತೆಗಳೇ ಜಾಸ್ತಿ ಎಂಬ ಆತಂಕ ವ್ಯಕ್ತವಾಗಿದೆ.
ಬಿಗಿಪಟ್ಟು: ಕೇಂದ್ರ-ರಾಜ್ಯ ಸರ್ಕಾರಗಳಿಗೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ತಿದ್ದುಪಡಿ ಕಾಯ್ದೆ ಸಾಧಕ-ಬಾಧಕ ಕುರಿತು ವಿಸõತ ಚರ್ಚೆ ನಡೆಸಲಿ. ರಾಜ್ಯದ ಹಾಲಿ ಕಾಯ್ದೆಯಲ್ಲಿನ ಲೋಪಗಳನ್ನು ಸರಿಪಡಿಸಿ ಇನ್ನಷ್ಟು ಬಲವರ್ಧಿಸಲಿ ಎಂದು ರೈತ ಸಂಘಟನೆ ಬಿಗಿಪಟ್ಟು ಹಿಡಿದಿದ್ದು, ಪ್ರತಿಪಕ್ಷಗಳು ಧ್ವನಿಗೂಡಿಸಿವೆ.