ಬೆಳಗಾವಿಯಲ್ಲಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದರು. 
ನ್ಯೂಸ್

ಬಿಜೆಪಿ-ಜೆಡಿಎಸ್ ಸಹಕಾರ ಲೆಕ್ಕಾಚಾರ: ಕೋಲಾರ, ಮಂಡ್ಯ, ಗ್ರಾಮಾಂತರದಲ್ಲಿ ಕಮಲ ಸಾಥ್?; ಉಳಿದೆಡೆ ದಳಪತಿಗಳ ನೆರವಿನ ನಿರೀಕ್ಷೆ

Webdesk - Ravikanth

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಿಚ್ಚಳ ಬಹುಮತ ಸಾಧಿಸಲೇಬೇಕೆಂದು ಆಡಳಿತರೂಢ ಬಿಜೆಪಿ ಪಣ ತೊಟ್ಟು, ಸಂಘಟನೆ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಜತೆಗೆ ಸಹಕಾರ ಪಡೆಯುವುದಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದೆ. ಪರಸ್ಪರ ಅನುಕೂಲಗಳ ಆಧಾರದಲ್ಲಿ ಸಹಕಾರ ಸೂತ್ರ ರೂಪುಗೊಳ್ಳುತ್ತಿದ್ದು, ಆಯಾ ಕ್ಷೇತ್ರದಲ್ಲಿನ ತಮ್ಮ ತಮ್ಮ ಪಕ್ಷದ ಮುಖಂಡರ ಅಭಿಪ್ರಾಯ ಆಧರಿಸಿ ಚಾಲ್ತಿಗೆ ತರಲು ಮುಂದಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಜೆಡಿಎಸ್ ಜತೆಗೆ ಮೈತ್ರಿ ಅಥವಾ ಹೊಂದಾಣಿಕೆ ಇಲ್ಲ. ಆ ಪಕ್ಷ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬೆಂಬಲ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದರು. ಆದರೆ ಬೆಂಬಲ ವಿಚಾರವನ್ನು ಸ್ಥಳೀಯ ನಾಯಕರಿಗೆ ಬಿಟ್ಟುಕೊಡುವ ಮೂಲಕ ಉಭಯ ಪಕ್ಷಗಳು ನಡು ಮಾರ್ಗ ಹುಡುಕಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಸೋಲಿಸುವುದು ಮಾತ್ರವಲ್ಲ, ಬೆಂಬಲ ಅಥವಾ ಮೈತ್ರಿ ಹೊರತಾದ ಸಹಕಾರವು ಇಬ್ಬರಿಗೂ ನೆರವಾಗಿರಬೇಕು. ಮುಂದಿನ ಚುನಾವಣೆಗಳಿಗೆ ಅಡ್ಡಿ ಉಂಟಾಗಬಾರದು ಎನ್ನುವುದು ‘ಸಹಕಾರ’ ಸೂತ್ರದ ತಿರುಳಾಗಿದೆ. ಬಿಜೆಪಿ ನಾಯಕರು ರಾಜ್ಯಮಟ್ಟದಲ್ಲಿ ಮಾತುಕತೆ ನಡೆಸುವ ಮುನ್ನವೇ ಕೆಲವೊಂದು ಕ್ಷೇತ್ರಗಳಲ್ಲಿ ಆಂತರಿಕ ಒಪ್ಪಂದಗಳಾಗಿದ್ದು, ಅದಕ್ಕನುಗುಣವಾದ ರಣತಂತ್ರ ಹೆಣೆಯಲಾಗಿದೆ ಎನ್ನಲಾಗಿದೆ.

ದುರ್ಬಲ ಕ್ಷೇತ್ರಗಳಲ್ಲಿ ಸಾಥ್: ಪಕ್ಷದ ಸಂಘಟನೆ ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿದ್ದರೆ ತಪು್ಪ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ 20 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಪಕ್ಷದ ಭವಿಷ್ಯ ಗಟ್ಟಿಗೊಳಿಸಲೆಂದು ಬೇರೆ ಪಕ್ಷಗಳ ಮುಖಂಡರನ್ನು ಸೆಳೆದಿದೆ. ಆದರೂ ನಿರೀಕ್ಷಿತ ಫಲಿತಾಂಶ ಸಿಗುವುದು ಕಷ್ಟವೆಂದು ಸಹಕಾರದ ಉಪಾಯ ಕಂಡುಕೊಂಡಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಜೆಡಿಎಸ್​ಗೆ ಅಘೋಷಿತ ಸಾಥ್ ನೀಡಲು ಕಮಲ ಪಡೆ ನಾಯಕರು ಒಲವು ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿಯಾಗಿ ಉಳಿದೆಡೆ ಜೆಡಿಎಸ್ ಮತದಾರರ ಸಂಖ್ಯಾಬಲದ ಆಧಾರದಲ್ಲಿ ನೆರವು ಪಡೆಯುವ ಚಿಂತನೆ ನಡೆಸಿದ್ದು, ಕಷ್ಟಕರ ಎನಿಸುವಂತಹ ಕ್ಷೇತ್ರಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂಬ ಕಾರಣಕ್ಕೆ ಬೆಂಬಲದತ್ತ ಒಲವು ತೋರಿಸಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪರಿಸ್ಥಿತಿ ಭಿನ್ನವಾಗಿದೆ. ಸಹಕಾರದ ಲೆಕ್ಕಾಚಾರ ಎಷ್ಟರಮಟ್ಟಿಗೆ ಫಲ ತಂದುಕೊಡುತ್ತದೋ ಗೊತ್ತಿಲ್ಲ. ಆದರೆ ಪ್ರತಿಯೊಂದು ಮತವೂ ಅಮೂಲ್ಯ ಎಂದು ಬಿಜೆಪಿ ಮೂಲಗಳು ಹೇಳಿವೆ.

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುವುದು ಮೊದಲ ಆದ್ಯತೆ, ಕಾಂಗ್ರೆಸ್ ಸೋಲಿಸುವುದು ಎರಡನೇ ಆದ್ಯತೆಯಾಗಿದೆ. ಕಾಂಗ್ರೆಸ್​ನಲ್ಲಿರುವ ದಲಿತ ಸಮುದಾಯದ ನಾಯಕರನ್ನು ತುಳಿದು ಸಿದ್ದರಾಮಯ್ಯ ಸಿಎಂ ಆದರು. ಇದೀಗ ದಲಿತೋದ್ಧಾರಕ ಎಂದು ಬಿಂಬಿಸಿಕೊಳ್ಳುತ್ತಿದ್ದು, ವಾಸ್ತವಾಂಶ ಅರಿತ ದಲಿತ ಸಮುದಾಯವು ಕಾಂಗ್ರೆಸ್ ಪಕ್ಷದಿಂದ ದೂರವಾಗಿದೆ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಬೆಳಗಾವಿಯಲ್ಲಿ ಸಿಎಂ ಸಭೆ

ಬೆಳಗಾವಿ: ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಶಾಸಕ ರಮೇಶ್ ಜಾರಕಿಹೊಳಿ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಮಹತ್ವದ ಮಾತುಕತೆ ನಡೆಸಿದರು. ಅಲ್ಲದೆ ಸಚಿವ ಉಮೇಶ್ ಕತ್ತಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರೊಂದಿಗೆ ಸಿಎಂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎನ್ನಲಾಗಿದೆ. ಪರಿಷತ್ ಚುನಾವಣೆ, ಸ್ಥಳೀಯ ಸಮಸ್ಯೆಗಳು ಹಾಗೂ ಚಳಿಗಾಲ ಅಧಿವೇಶನ ಸಂಬಂಧ ಈ ವೇಳೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿಎಂ ಜತೆಗಿನ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ರಮೇಶ್ ಜಾರಕಿಹೊಳಿ ಮಾತನಾಡಿ, ಮೊದಲ ಪ್ರಾಶಸ್ಱದ ಮತ ಯಾರಿಗೆ ಹಾಕಬೇಕು? ಎರಡನೇ ಮತ ಯಾರಿಗೆ ಹಾಕಬೇಕೆಂಬ ಬಗ್ಗೆ ಸಿಎಂ ಜತೆ ಇನ್ನೊಮ್ಮೆ ರ್ಚಚಿಸಿ ಹೇಳುತ್ತೇನೆ. ಅದು ಇನ್ನೂ ಅಂತಿಮವಾಗಿಲ್ಲ. ಇನ್ನೊಂದು ಸುತ್ತಿನ ಸಭೆ ಆಗುತ್ತದೆ. ಸದ್ಯಕ್ಕೆ ಏನೂ ಮಾತನಾಡುವುದಿಲ್ಲ ಎಂದರು.

ಜೆಡಿಎಸ್ ಬೆಂಬಲ ಕೇಳಿಲ್ಲ ಎಂದ ಬೊಮ್ಮಾಯಿ: ವಿಧಾನಪರಿಷತ್ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದಿರುವುದು ಜೆಡಿಎಸ್ ಆಂತರಿಕ ವಿಚಾರ. ಜೆಡಿಎಸ್ ಬೆಂಬಲವನ್ನು ನಾನೇನೂ ಕೇಳಿರಲಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದರು. ಎಲ್ಲೆಲ್ಲಿ ಅಭ್ಯರ್ಥಿಗಳನ್ನು ಹಾಕಿಲ್ಲವೋ ಅಲ್ಲಿ ಬೆಂಬಲ ಕೊಡುವಂತೆ ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಜೆಡಿಎಸ್ ನಾಯಕರನ್ನು ಕೇಳಿದ್ದರು ಅಷ್ಟೇ ಎಂದರು. ಈ ಚುನಾವಣೆಯಲ್ಲಿ ಪ್ರಾಶಸ್ಱದ ಮತದಾನ ಮುಖ್ಯವಾಗಿರುತ್ತದೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ಱದ ಅತ್ಯಧಿಕ ಮತ ಗಳಿಸಿ ಗೆಲುವು ಸಾಧಿಸುತ್ತಾರೆ. ಎರಡನೇ ಮತವನ್ನು ಮತದಾರರು ಯಾರಿಗೆ ನೀಡುತ್ತಾರೆ ಎಂದು ಹೇಳಲಾಗದು. ಮತ ದಾರರ ಗೌಪ್ಯತೆಯನ್ನು ನಾವ್ಯಾರೂ ಚರ್ಚೆ ಮಾಡಲೂ ಆಗುವುದಿಲ್ಲ. ಈ ಚರ್ಚೆ ಅಪ್ರಸ್ತುತ. ಬಿಜೆಪಿ ಗೆಲ್ಲಬೇಕು. ಕಾಂಗ್ರೆಸ್ ಸೋಲಿಸಬೇಕು ಎನ್ನುವುದೇ ನಮ್ಮ ಗುರಿ ಎಂದರು.

ಫಲಿತಾಂಶವೇ ವಿಪಕ್ಷ ನಾಯಕರಿಗೆ ಉತ್ತರ

ಬೆಂಗಳೂರು: ಸರ್ಕಾರ ಹಾಗೂ ಪಕ್ಷದ ವರ್ಚಸ್ಸು, ಸಂಘಟನಾ ಬಲದ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಪ್ರತಿಪಕ್ಷ ನಾಯಕರಿಗೆ ವಿಧಾನಪರಿಷತ್ ಚುನಾವಣೆ ಫಲಿತಾಂಶವೇ ಸೂಕ್ತ ಉತ್ತರ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು.

ಮಂಗಳವಾರ ವಿಧಾನಪರಿಷತ್ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರನ್ನೋ ಮೆಚ್ಚಿಸಲು ಅಥವಾ ತೃಪ್ತಿಪಡಿಸುವುದಕ್ಕಾಗಿ ಹೇಳಿಕೆ ನೀಡುವ ಜಾಯಮಾನ ನನ್ನದಲ್ಲ. ಚುನಾವಣೆಯಲ್ಲಿ ಪಕ್ಷದ ಪರ ಒಲವು, ಉತ್ತಮ ವಾತಾವರಣ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸ್ಥಿತಿ ಅವಲೋಕಿಸಿ ಮಾತನಾಡಿರುವೆ ಎಂದು ಸಮರ್ಥಿಸಿಕೊಂಡರು. ಪರಿಷತ್​ನಲ್ಲೂ ಪಕ್ಷ ನಿಚ್ಚಳ ಬಹುಮತ ಸಾಧಿಸಿದರೆ ಗ್ರಾಮೀಣ, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ನಿರೀಕ್ಷಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಲಿದೆ. ಗ್ರಾಮೀಣ ಪ್ರದೇಶದ ಮತದಾರರಿಗೆ ಇದೇ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದು, ಸಕಾರಾತ್ಮಕ ಸ್ಪಂದನೆ ಲಭಿಸಿದೆ ಎಂದರು. 25ರಲ್ಲಿ 20 ಕ್ಷೇತ್ರಗಳಿಗೆ ಪಕ್ಷ ಸ್ಪರ್ಧಿಸಿದೆ. ಈ ಪೈಕಿ 15 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದರು.

2ನೇ ಸುತ್ತಿನ ಪ್ರಚಾರ: ಮೊದಲ ಸುತ್ತಿನಲ್ಲಿ ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಕಡೆ ಪ್ರಚಾರ ಸಭೆಗಳಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದಾರೆ. ಮಂಗಳವಾರದಿಂದ ಎರಡನೇ ಸುತ್ತಿನ ಪ್ರಚಾರ ನಡೆಸಲಿದ್ದು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ನಂತರ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಸ್ಥಳೀಯ ಮುಖಂಡರಿಗೆ ಬಿಟ್ಟಿದ್ದು

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಯಲ್ಲಿ ಬಿಜೆಪಿಗೆ ಬೆಂಬಲ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಿರ್ಧಾರ ಪ್ರಕಟಿಸಿದೆ. ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಯಾವ ಒಳ ಒಪ್ಪಂದವೂ ಇಲ್ಲ, ಹೊರ ಒಪ್ಪಂದವೂ ಇಲ್ಲ. ಯಾವ ಪಕ್ಷಕ್ಕೆ ಬೆಂಬಲ ಕೊಡಬೇಕು ಎಂಬುದನ್ನು ಸ್ಥಳೀಯವಾಗಿ ನಮ್ಮ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು. ನಮ್ಮ ಪಕ್ಷದ ಭವಿಷ್ಯ ದೃಷ್ಟಿಯಿಂದ ಜಿಲ್ಲಾ ಘಟಕದ ಮುಖಂಡರ ಅಭಿಪ್ರಾಯ ಕ್ರೋಡೀಕರಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಆಯಾ ಕ್ಷೇತ್ರದ ಸ್ಥಿತಿ-ಗತಿ ಆಧರಿಸಿ ಕೆಲವು ಕಡೆ ಬಿಜೆಪಿ, ಮತ್ತೆ ಕೆಲವು ಕಡೆ ಕಾಂಗ್ರೆಸ್​ಗೆ ಬೆಂಬಲ ಕೊಡುತ್ತಿದ್ದೇವೆ ಎಂದರು. ನಾವು ಸ್ಪರ್ಧಿಸಿರುವ 6 ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ಪೈಪೋಟಿ ಇದೆ. ಇಲ್ಲೆಲ್ಲ ಯಾವ ಪಕ್ಷದ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ. ಕೆಲವು ಜಿಲ್ಲೆಗಳಲ್ಲಿ ನಮ್ಮ ಪಕ್ಷ ನಿರ್ಣಾಯಕ ಸ್ಥಾನದಲ್ಲಿದೆ. ಯಾದಗಿರಿ, ಕಲಬುರಗಿ ಸೇರಿ ಅನೇಕ ಜಿಲ್ಲೆಯಲ್ಲಿ ನಮ್ಮ ಮತದಾರರು ಹೆಚ್ಚಿದ್ದಾರೆ. ಹಾಗಾಗಿ ಬಿಜೆಪಿ ನಾಯಕರು ನಮ್ಮ ಬೆಂಬಲ ಕೋರಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪ ಮುತ್ಸದ್ದಿತನ ದಿಂದಲೇ ನಮ್ಮ ಬೆಂಬಲ ಕೇಳಿದ್ದಾರೆ. ಮೊಬೈಲ್ ಕರೆ ಮಾಡಿಯೂ ಮಾತನಾಡಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೋ, ಬಿಜೆಪಿ ಗೆಲ್ಲುತ್ತೊ ಎನ್ನುವ ಪ್ರಶ್ನೆ ಇಲ್ಲ. ಪಕ್ಷ ಸಂಘಟನೆಗೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. 2023ಕ್ಕೆ 123 ಸ್ಥಾನ ಗೆಲ್ಲಬೇಕು ಎನ್ನುವುದು ನಮ್ಮ ಗುರಿ.| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ಕೆಲವೆಡೆ ಕಾಂಗ್ರೆಸ್​ಗೆ ದಳ ಬೆಂಬಲ ಇನ್ನೂ ಹಲವೆಡೆ ನಿರ್ಧಾರ ಆಗಿಲ್ಲ

ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಸ್ಥಳೀಯವಾಗಿ ಯಾವ ಪಕ್ಷಕ್ಕೆ ಬೆಂಬಲ ಸೂಚಿಸಬೇಕು ಎಂಬ ಬಗ್ಗೆ ರ್ಚಚಿಸಲು ಪಕ್ಷದ ನಾಯಕರು ಮುಂದಾಗಿದ್ದಾರೆ. ಈಗಾಗಲೆ ಗದಗ, ಧಾರವಾಡ, ಹಾವೇರಿ, ರಾಯಚೂರು, ಕೊಪ್ಪಳ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬೆಂಬಲ ನೀಡುವುದಾಗಿ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರು ಘೋಷಿಸಿದ್ದಾರೆ. ಇನ್ನು ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ವೈಎಸ್​ವಿ ದತ್ತ ಬಹಿರಂಗವಾಗಿಯೇ ಕಾಂಗ್ರೆಸ್ ಪರ ಪ್ರಚಾರ ಮಾಡುತಿದ್ದು, ಚಿಕ್ಕಮಗಳೂರಿನಲ್ಲೂ ಕಾಂಗ್ರೆಸ್​ಗೆ ಬೆಂಬಲ ಸಿಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಮತದಾರರು ಹಾಗೂ ಪಕ್ಷದ ಪದಾಧಿಕಾರಿಗಳ ಜತೆ ಬುಧವಾರ ರ್ಚಚಿಸಿ ತೀರ್ಮಾನ ಮಾಡುವುದಾಗಿ ಜಿಲ್ಲಾಧ್ಯಕ್ಷರುಗಳು ತಿಳಿಸಿದ್ದಾರೆ.

ಕೊಡಗಲ್ಲಿ ಬಿಜೆಪಿಗೆ ಸಾಥ್!: ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲಿತ ಮತದಾರರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ! ಇದಕ್ಕೆ ಪುಷ್ಟಿ ನೀಡುವಂತೆ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ ಪೂವಯ್ಯ ಅವರೊಂದಿಗೆ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಮಂಗಳವಾರ ವಿವಿಧೆಡೆಯಲ್ಲಿ ಮತಯಾಚನೆ ನಡೆಸಿದರು. ಈ ನಡುವೆ ನಮ್ಮ ಪಕ್ಷ ಬೆಂಬಲಿತ ಸದಸ್ಯರಿಗೆ ಅವರ ಇಚ್ಛೆ ಯಂತೆ ಮತ ಚಲಾಯಿಸಲು ಸೂಚನೆ ನೀಡಿದ್ದೇನೆ. ಹೀಗಿದ್ದರೂ, ನಾಯಕರ ನಿರ್ಧಾರದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾಹಿತಿ ನೀಡಿದ್ದಾರೆ.

ಒಳ್ಳೆಯ ತೀರ್ಮಾನ ಕೈಗೊಂಡ ಎಚ್​ಡಿಕೆ

ದಾವಣಗೆರೆ: ವಿಧಾನಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎನ್ನುವುದನ್ನು ಸ್ಥಳೀಯ ನಾಯಕರಿಗೇ ಬಿಡುವುದಾಗಿ ಹೇಳಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಎಚ್​ಡಿಕೆ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಸಂತೋಷವಿದೆ. ಜೆಡಿಎಸ್ ನಾಯಕರು ಸ್ಥಳೀಯ ಪರಿಸ್ಥಿತಿ ನೋಡಿಕೊಂಡು, ಅವರ ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಕಡೆ ಬಿಜೆಪಿಗೆ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸಾಮಾನ್ಯವಾಗಿ ಬಿಜೆಪಿ ಗೆಲ್ಲುವ ಅವಕಾಶ ಇರುವ ಕಡೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಜತೆಗೆ ಏಕೆ ಹೋಗುತ್ತಾರೆ? ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಕುಮಾರಸ್ವಾಮಿ ಅವರು ಯಡಿಯೂರಪ್ಪ ಮೇಲಿಟ್ಟಿರುವ ವಿಶ್ವಾಸವನ್ನು ಬಿಜೆಪಿ ಮೇಲೆ ಇಟ್ಟಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಲು ಬಿಎಸ್​ವೈ ನಿರಾಕರಿಸಿದರು. ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆಯಾಗುವುದೇ ಎಂಬ ಪ್ರಶ್ನೆಗೆ, ‘ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಏನಾಗುವುದೋ ನೋಡೋಣ’ ಎಂದು ಪ್ರತಿಕ್ರಿಯಿಸಿದರು. ಸಂಪುಟ ವಿಸ್ತರಣೆ ವೇಳೆ ಬಿ.ವೈ.ವಿಜಯೇಂದ್ರಗೆ ಸಚಿವ ಸ್ಥಾನ ಕೇಳುವ ಪ್ರಶ್ನೆ ಇಲ್ಲ, ಆ ವಿಚಾರದಲ್ಲಿ ತಾವು ಮಧ್ಯಪ್ರವೇಶ ಮಾಡುವುದಿಲ್ಲ. ಅದೆಲ್ಲವೂ ಪಕ್ಷ ಹಾಗೂ ಕೇಂದ್ರದ ನಾಯಕರಿಗೆ ಬಿಟ್ಟ ವಿಷಯ. ಈ ಬಗ್ಗೆ ನಾನು ಯಾವುದೇ ಸಲಹೆ ಕೊಟ್ಟಿಲ್ಲ ಎಂದು ತಿಳಿಸಿದರು.