ನ್ಯೂಸ್

159 ಅಲ್ಪ ಸಂಖ್ಯಾತ ಮಹಿಳೆಯರಿಗೆ ಕುಕ್ಕರ್ ವಿತರಿಸಿದ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳೆಲ್ಲರೂ ತಮ್ಮದೇ ಆದ ಯೋಜನೆ ರೂಪಿಸಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಮತದಾರರನ್ನು ತಲುಪುವ ಉದ್ಧೇಶದಿಂದ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಅಭ್ಯರ್ಥಿಗಳು ಸಂಘಟಿಸುತ್ತಲೇ ಇದ್ದಾರೆ. ಜತೆಗೆ ಪ್ರತಿ ವರ್ಷದಂತೆ ಈ ವರ್ಷವೂ ಮಹಿಳಾ ಮತಗಳನ್ನು ಪಡೆಯಲು ಕ್ಷೇತ್ರದ ಮಹಿಳೆಯರಿಗೆ ಗಿಫ್ಟ್ ನೀಡಲಾಗುತ್ತಿದೆ. ಈಗಾಗಲೇ ಕೆಲ ಅಭ್ಯರ್ಥಿಗಳು ಉಡುಗೊರೆ ನೀಡಿ ಸುದ್ದಿಯಾಗಿದ್ದಾರೆ.

ಇದೀಗ ಶಾಸಕ ಉದಯ್ ಗರುಡಾಚಾರ್ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ಮುಸ್ಲಿಂ ಮಹಿಳೆಯರಿಗೆ ಕುಕ್ಕರ್ ನೀಡಿದ್ದಾರೆ. 159 ಮುಸ್ಲಿಂ ಮಹಿಳೆಯರಿಗೆ ಕುಕ್ಕರ್ ವಿತರಿಸಿದ್ದಾರೆ. ಲಾಲ್​ಬಾಗ್, ಸಿದ್ಧಾಪುರದಲ್ಲಿ ನಿನ್ನೆ ಮಧ್ಯಾಹ್ನ ಕುಕ್ಕರ್ ವಿತರಿಸಿದ್ದಾರೆ. ಮುಸ್ಲಿಂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕುಕ್ಕರ್ ವಿತರಣೆ ಮಾಡಿರುವುದು, ಇದೀಗ ಉದಯ್ ಗರುಡಾಚಾರ್ ಅಲ್ಪ ಸಂಖ್ಯಾತ ಮತಗಳನ್ನು ಟಾರ್ಗೆಟ್ ಮಾಡಿದರಾ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

ಮುಸ್ಲಿಂ ಮತಗಳಿಗಾಗಿ ಉದಯ್ ಗರುಡಾಚಾರ್ ಈ ರೀತಿ ಕುಕ್ಕರ್ ಹಂಚಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೇ ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರ ಯಾಕೆ ಕುಕ್ಕರ್ ಹಂಚಿಕೆ ಮಾಡಿದ್ದೀರಿ? ಎಂದು ಹಿಂದು ಕಾರ್ಯಕರ್ತರು ಪ್ರಶ್ನಿಸಿ ಆಕ್ರೋಶ ಹೊರ ಹಾಕಿರುವ ಘಟನೆಯೂ ನಡೆದಿದೆ. ಇಂದೂ ಕೂಡ ಮಹಿಳೆಯರಿಗೆ ಕುಕ್ಕರ್ ವಿತರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.