ನ್ಯೂಸ್

ನಟಿ, ರಾಜಕಾರಣಿ ರೋಜಾ ಆಸ್ಪತ್ರೆಗೆ ದಾಖಲು: ಐಸಿಯುನಿಂದ ಸ್ಥಳಾಂತರ

ಚೆನ್ನೈ: ನಟಿ, ರಾಜಕಾರಣಿ ಆರ್​ಕೆ ರೋಜಾ ಅವರು ಶಸ್ತ್ರಚಿಕಿತ್ಸೆಗೆಂದು ಸೋಮವಾರ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರ ಪತಿ ಸೆಲ್ವಮಣಿ ಅವರು ಆಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

ವೈಎಸ್​ಆರ್​ಸಿಪಿ ಶಾಸಕಿ ಮತ್ತು ಎಪಿಐಐಸಿ ಮುಖ್ಯಸ್ಥೆಯಾಗಿರುವ ರೋಜಾ ಅವರ ಸದ್ಯದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಕೆಯನ್ನು ಐಸಿಯುನಿಂದ ರೋಗಿಗಳ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರೋಜಾ ಅವರ ಮೇಲೆ ಎರಡು ವಾರಗಳ ಕಾಲ ನಿಗಾ ಇಡಲು ವೈದ್ಯರು ನಿರ್ಧರಿಸಿದ್ದಾರೆ. ಕರೊನಾ ವೈರಸ್​ ಸೋಂಕಿನ ಕಾರಣದಿಂದ ಕುಟುಂಬಸ್ಥರು ಸೇರಿದಂತೆ ರೋಜಾರ ಭೇಟಿಗೆ ಯಾರಿಗೂ ಅನುಮತಿ ಇಲ್ಲ ಎಂದು ಸೆಲ್ವಮಣಿ ಹೇಳಿದ್ದಾರೆ.

ರೋಜಾ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಸೆಲ್ವಮಣಿ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಕಳೆದ ವರ್ಷವೇ ರೋಜಾ ಅವರಿಗೆ ಆಪರೇಷನ್​ ನಡೆಯಬೇಕಿತ್ತು. ಆದರೆ, ಕರೊನಾ ಕಾರಣ ಮುಂದೂಡಲಾಗಿತ್ತು. ಜನವರಿಯಲ್ಲಿ ಸ್ಥಳೀಯ ಚುನಾವಣೆ ಇದ್ದಿದ್ದರಿಂದ ಆಪರೇಷನ್​ ವಿಳಂಬವಾಗಿತ್ತು. ಹೀಗಾಗಿ ಅವರ ಆರೋಗ್ಯ ಏರುಪೇರಾಗಿ, ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)