Chennai: ಮರ್ಯಾದಾ ಹತ್ಯೆಗಳ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವ ತಮಿಳುನಾಡು ಸರ್ಕಾರ, ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಕೆ.ಎನ್. ಬಾಷಾ ನೇತೃತ್ವದಲ್ಲಿ ಆಯೋಗವನ್ನು ರಚಿಸುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್(MK Stalin) ಶನಿವಾರ (ಅ 18) ರಾಜ್ಯ ವಿಧಾನಸಭೆಯಲ್ಲಿ ಘೋಷಿಸಿದರು.
ತಮಿಳುನಾಡು ವಿಧಾನಸಭೆಯಲ್ಲಿ ಮರ್ಯಾದಾ ಹತ್ಯೆಗಳ ಕುರಿತಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, ಈ ಪದ್ಧತಿಯ ಹಿಂದಿನ ಆಳವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳನ್ನು ಎತ್ತಿ ತೋರಿಸಿದರು. ಈ ತಮಿಳು ಮಣ್ಣು ಎಲ್ಲರೂ ಸಮಾನರು ಎಂದು ಹೇಳಿದ ವಲ್ಲುವನಿಗೆ ಜನ್ಮ ನೀಡಿತು, ಇದು ಯಾವಾಗಲೂ ನಮ್ಮ ಸಂಸ್ಕೃತಿಯ ರೂಢಿಯಾಗಿದೆ. ಆದರೂ, ಕಾಲಾನಂತರದಲ್ಲಿ, ಕೆಲಸದ ವರ್ಗೀಕರಣಗಳು ಜಾತಿ ಶ್ರೇಣಿಗಳಾಗಿ ಮಾರ್ಪಟ್ಟವು.
ಮೇಲ್ವರ್ಗ ಮತ್ತು ಕೆಳ ವರ್ಗಗಳನ್ನು ರಚಿಸಲಾಯಿತು, ಆದರೆ ಅದೇ ಸಮಯದಲ್ಲಿ, ಸುಧಾರಣಾವಾದಿ ಧ್ವನಿಗಳು ಹೊರಹೊಮ್ಮಿದವು. ಅಯೋಧಿದಾಸ ಪಂಡಿತರ್, ಥಂಥೈ ಪೆರಿಯಾರ್, ತಿರು ವಿ ಕಾ, ಭಾರತಿದಾಸನ್ ಮತ್ತು ಅಣ್ಣಾ ಅವರಂತಹ ನಾಯಕರು ತಮಿಳರ ಸಮಾನತೆ ಮತ್ತು ಹಕ್ಕುಗಳಿಗಾಗಿ ಹೋರಾಡಿದರು ಎಂದು ಇದೇ ವೇಳೆ ತಿಳಿಸಿದರು. ಮರ್ಯಾದಾ ಹತ್ಯೆಗಳಂತಹ ಘಟನೆಗಳು ಸಮಾಜಕ್ಕೆ ಕಳಂಕ, ಯಾವುದೇ ಕಾರಣಕ್ಕೂ ಇನ್ನೊಬ್ಬರನ್ನು ಕೊಲ್ಲುವುದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಮಹಿಳೆಯ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುವ ಪುರುಷಾಧಿಪತ್ಯವು ಈ ಅಪರಾಧಗಳ ಹಿಂದೆ ಇದೆ ಎಂದರು.
ಹೊಸದಾಗಿ ಘೋಷಿಸಲಾಗಿರುವ ಆಯೋಗವು ಕಾನೂನು ತಜ್ಞರನ್ನು ಒಳಗೊಂಡಿದ್ದು, ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಮರ್ಯಾದಾ ಹತ್ಯೆಗಳಿಂದ ಪ್ರಭಾವಿತರಾದವರಿಂದ ಸಲಹೆಗಳನ್ನು ಪಡೆಯಲಿದೆ. ಇದರ ಶಿಫಾರಸುಗಳ ಆಧಾರದ ಮೇಲೆ, ತಮಿಳುನಾಡು ಸರ್ಕಾರವು, ಇಂತಹ ಅಪರಾಧಗಳನ್ನು ತಡೆಗಟ್ಟಲು ಹೊಸ ಕಾನೂನನ್ನು ಪರಿಚಯಿಸಲಿದೆ ಎಂದರು.
ಇದನ್ನೂ ಓದಿ:Infiltrators: ವಿಪಕ್ಷಗಳು ಮತಬ್ಯಾಂಕ್ ಲಾಭಕ್ಕಾಗಿ ಒಳನುಸುಳುಕೋರರನ್ನು ಸ್ವಾಗತಿಸುತ್ತಿವೆ: ಅಮಿತ್ ಷಾ ವಾಗ್ದಾಳಿ
ಮರ್ಯಾದಾ ಹತ್ಯೆಗಳಂತಹ ಎಲ್ಲಾ ಅನ್ಯಾಯಗಳಿಗೆ ಪೂರ್ಣವಿರಾಮ ಹಾಕಬೇಕು, ಸಾಮಾಜಿಕ ಸುಧಾರಣಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಜಾಗೃತಿ ಮೂಡಿಸುವಲ್ಲಿ ಮತ್ತು ಎಲ್ಲಾ ರೀತಿಯ ದಬ್ಬಾಳಿಕೆಯ ನಡವಳಿಕೆಯನ್ನು ಕೊನೆಗೊಳಿಸುವಲ್ಲಿ ಕೈಜೋಡಿಸಬೇಕೆಂದು ಸಿಎಂ ಸ್ಟಾಲಿನ್ ಮನವಿ ಮಾಡಿದರು.(ಏಜೆನ್ಸೀಸ್)