ನಲ್ಗೊಂಡ: ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಸಂಬಳ ಸಾಕಾಗುತ್ತಿಲ್ಲ ಅಂತ ಮನನೊಂದು ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಪುಷ್ಪಲತಾ (26) ಮೃತ ಯುವತಿ. ನಲ್ಗೊಂಡ ಜಿಲ್ಲೆಯ ಹಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನಗೆ ಬರುತ್ತಿರುವ ಸಂಬಳದಲ್ಲಿ ಮಕ್ಕಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾಳೆ.
ಪುಷ್ಪಲತಾ ತಿರುಮಲಗಿರಿಸಾಗರ ಮಂಡಲದ ಅಲ್ವಾಲ ಗ್ರಾಮದ ಮಹೇಶ್ ಎಂಬಾತನನ್ನು ವರಿಸಿದ್ದಳು. ದಂಪತಿಗೆ ಮಗಳು ಸಾನ್ವಿತಾ ಮತ್ತು ಮಗ ಬಾಬು ಸೈನಂದನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಗಂಡ ಪನಗಲ್ ಮಿಷನ್ ಭಗೀರಥ ವಾಟರ್ ಟ್ರೀಟ್ಮೆಂಟ್ ಸೆಂಟರ್ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಸಂಬಳ ಸಾಕಾಗದೇ ಕುಟುಂಬ ನಿರ್ವಹಿಸಲು ಆಗುತ್ತಿಲ್ಲ ಅಂತ ವರ್ಷದ ಹಿಂದಷ್ಟೇ ಮಹೇಶ್ ಕೂಡ ಸಾವಿಗೆ ಶರಣಾಗಿದ್ದ.
ಬಳಿಕ ಗಂಡನ ಕೆಲಸ ಪುಷ್ಪಲತಾಗೆ ಬಂದಿತ್ತು. ಸಾಯಿ ಪ್ರತಾಪ ನಗರದ ಬಾಡಿಗೆ ಮನೆಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಪುಷ್ಪಲತಾ ನೆಲೆಸಿದ್ದಳು. ಗುರುವಾರ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ನನಗೆ ಸಿಗುತ್ತಿದ್ದ 9500 ರೂ. ಸಂಬಳ ಸಾಕಾಗುತ್ತಿರಲಿಲ್ಲ. ಅಲ್ಲದೆ, ಸಮಯಕ್ಕೆ ಸರಿಯಾಗಿ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾಳೆ. ಹೊಟ್ಟೆಯಲ್ಲಿ ಗಡ್ಡೆಯಿದ್ದು, ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. (ಏಜೆನ್ಸೀಸ್)