ನ್ಯೂಸ್

ಕಾಣೆಯಾಗಿದ್ದ ಇಬ್ಬರು ಮಕ್ಕಳು ಶವವಾಗಿ ಪತ್ತೆ! ಮುಗಿಲು ಮುಟ್ಟಿತು ಹೆತ್ತವರ ಆಕ್ರಂದನ

ಮೋಹನ್​ ಶೆಟ್ಟಿ

ತುಮಕೂರು: ನಿನ್ನೆ (ನ.07) ಸಂಜೆ ಮನೆಯಿಂದ ಆಟವಾಡಲು ಎಂದು ಹೊರಹೋದ ಇಬ್ಬರು ಮಕ್ಕಳು, ಇಂದು ಬೆಳಗ್ಗೆ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಘಟನೆ ತುಮಕೂರಿನ ತಿಪಟೂರು ತಾಲೂಕಿನ ಹುಚ್ಚನಹಟ್ಟಿಯ ಗೊಲ್ಲರಹಟ್ಟಿಯಲ್ಲಿ ವರದಿಯಾಗಿದೆ.

ಕಾಮಗಾರಿ ನಡೆಯುತ್ತಿದ್ದ ಎತ್ತಿನ ಹೊಳೆ ನಾಲೆಯ ಗುಂಡಿಯಲ್ಲಿ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಮೃತ ಬಾಲಕರನ್ನು ಯುದುವೀರ್ (8), ಮನೋಹರ್ (10) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ತಿಪಟೂರು ಗ್ರಾಮಾಂತರ ಠಾಣೆಗೆ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಮಕ್ಕಳಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರಿಗೆ ಇಂದು ಬೆಳಗ್ಗೆ ಅದೇ ಗ್ರಾಮದ ಬಳಿ ಹಾದುಹೋಗಿರುವ ಎತ್ತಿನಹೊಳೆ ನಾಲೆಯ ಗುಂಡಿಯಲ್ಲಿ ಇಬ್ಬರು ಮಕ್ಕಳ ಶವ ಪತ್ತೆಯಾದ ಬಗ್ಗೆ ಮಾಹಿತಿ ಲಭಿಸಿದೆ.

ಕಾಲು ಜಾರಿ ಬಿದ್ದ ಶಂಕೆ

ನೀರಿನಲ್ಲಿ ಆಟವಾಡಲು ಹೋಗಿ ಕಾಲು ಜಾರಿ ಬಿದ್ದ ಹಿನ್ನಲೆ ಮಕ್ಕಳು ಕಾಮಗಾರಿ ನಡೆಯುತ್ತಿದ್ದ ಎತ್ತಿನಹೊಳೆ ನಾಲೆ ಗುಂಡಿಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಮಕ್ಕಳ ಮೃತದೇಹ ಕಂಡು ಹೆತ್ತವರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಘಟನೆ ನಡೆದ ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.