ಮಿಸ್ ಯೂನಿವರ್ಸ್ 2026 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕೇರಳದ ಮಾಡೆಲ್ ಕಜಿಯಾ ಲಿಜ್ ಮೆಜೊ 
ನ್ಯೂಸ್

ಭಾರತಕ್ಕೆ ತಪ್ಪಿದ ಮಿಸ್ ಯೂನಿವರ್ಸ್ ಕಿರೀಟ; ಟಾಪ್ 12 ತಲುಪದೆ ಹೊರಬಿದ್ದ ಕಜಿಯಾ ಯಾರು? | Kaziah Liz Mejo

Kaziah Liz Mejo: ಮಿಸ್ ಯೂನಿವರ್ಸ್ 2026 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಜಿಯಾ ಲಿಜ್ ಮೆಜೊ ಅವರ ಪಯಣ ಟಾಪ್ 12 ಹಂತಕ್ಕೂ ಮುನ್ನ ಅಂತ್ಯಗೊಂಡಿದೆ. 116 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಅವರು ಟಾಪ್ 30ರವರೆಗೆ ತಲುಪಿದ್ದರು.

ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2026 ಸ್ಪರ್ಧೆ ಈ ಬಾರಿ 75ನೇ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಕಜಿಯಾ ಲಿಜ್ ಮೆಜೊ ಯಾರು?

ಕೇರಳದ ಆಲಪ್ಪುಳ ಜಿಲ್ಲೆಯ ಮಾವೇಲಿಕ್ಕರ ಮೂಲದ 19 ವರ್ಷದ ಕಜಿಯಾ, ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದ ಕೇರಳದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಆಗಸ್ಟ್ 23ರಂದು ಜೈಪುರದಲ್ಲಿ ನಡೆದ ಸ್ಪರ್ಧೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಮಾಡೆಲಿಂಗ್ ಜತೆ ಕಾನೂನು ವ್ಯಾಸಂಗ

ಮಾಡೆಲಿಂಗ್ ಜತೆಗೆ ಬೆಂಗಳೂರಿನಲ್ಲಿ ಕಾನೂನು ಪದವಿಯನ್ನೂ ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಿಸ್ ಟೀನ್ ದಿವಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಜಿಯಾ, 2025ರ ಮಿಸ್ ಟೀನ್ ಇಂಟರ್‌ನ್ಯಾಷನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಮೊದಲ ರನ್ನರ್ ಅಪ್ ಸ್ಥಾನ ಪಡೆದಿದ್ದರು.

ಕೇರಳದ ಸಂಸ್ಕೃತಿಗೆ ವಿಶೇಷ ಗೌರವ

ಮಿಸ್ ಯೂನಿವರ್ಸ್ ಸ್ಪರ್ಧೆಯ ಸಂದರ್ಶನ ಸುತ್ತಿನಲ್ಲಿ ಕೇರಳದ ಸಾಂಪ್ರದಾಯಿಕ ಕಸವು ಸೀರೆ ವಿನ್ಯಾಸದಿಂದ ಪ್ರೇರಿತವಾದ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ರಾಷ್ಟ್ರೀಯ ಉಡುಗೆ ಸ್ಪರ್ಧೆಯಲ್ಲಿ ಭಾರತದ ವಿವಿಧ ಭಾಗಗಳ ಜವಳಿ ಸಂಪ್ರದಾಯ ಮತ್ತು ಕರಕುಶಲತೆಯನ್ನು ಪ್ರತಿಬಿಂಬಿಸುವ ಉಡುಪನ್ನು ಪ್ರದರ್ಶಿಸಿದ್ದರು.

ಇದನ್ನೂ ಓದಿ: ಬ್ರೇಕಪ್‌ನಿಂದ ಹಿಮ್ಮಡಿ ಬಿರುಕುವರೆಗೆ.. ಎಲ್ಲದಕ್ಕೂ ಒಂದೇ ಪರಿಹಾರ ‘ಗ್ರೌಟ್ ಭರ್ ದೇಂಗೇ’! | Grout Bhar Denge

ಟಾಪ್ 12ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಕಜಿಯಾ ತಮ್ಮ ಸ್ಪರ್ಧಾ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.