ಬ್ರೇಕಪ್‌ನಿಂದ ಹಿಮ್ಮಡಿ ಬಿರುಕುವರೆಗೆ.. ಎಲ್ಲದಕ್ಕೂ ಒಂದೇ ಪರಿಹಾರ ‘ಗ್ರೌಟ್ ಭರ್ ದೇಂಗೇ’! | Grout Bhar Denge

 Grout Bhar Denge
ಗ್ರೌಟ್ ಭರ್ ದೇಂಗೇ’ ಎಂದ ಟೈಲ್ ಕೆಲಸಗಾರ
Published on: 

Grout Bhar Denge: ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಡಿಯೋ ಯಾವಾಗ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಇದೀಗ ಟೈಲ್ ಕೆಲಸಗಾರನೊಬ್ಬ ಹೇಳಿದ ಒಂದೇ ಡೈಲಾಗ್ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ‘ಗ್ರೌಟ್ ಭರ್ ದೇಂಗೇ’ಎಂಬ ಮಾತು ಈಗ ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರ ಎಂಬಂತೆ ಮೀಮ್ಸ್ ಮತ್ತು ರೀಲ್ಸ್‌ಗಳಲ್ಲಿ ಟ್ರೆಂಡ್ ಆಗುತ್ತಿದೆ.

ನಾಸಿಮ್ ಅಲ್ವಿ ಎಂಬ ಟೈಲ್ ಕೆಲಸಗಾರನ ವಿಡಿಯೋ ಈ ಟ್ರೆಂಡ್‌ಗೆ ಕಾರಣ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಟೈಲ್ಸ್ ನಡುವಿನ ಖಾಲಿ ಜಾಗಗಳನ್ನು ಗ್ರೌಟ್‌ನಿಂದ ತುಂಬುವ ವಿಧಾನವನ್ನು ಅವರು ತೋರಿಸಿದ್ದಾರೆ. ಟೈಲ್ಸ್ ನಡುವಿನ ಅಂತರವನ್ನು ಅಚ್ಚುಕಟ್ಟಾಗಿ ತುಂಬಿ, ಕೆಲಸ ಮುಗಿಸಿದ ಬಳಿಕ ಆ ಜಾಗ ಕಾಣದಂತೆ ಮಾಡಬಹುದು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಟೈಲ್ ಕೆಲಸಗಾರನ ವಿಡಿಯೋಗೆ ನೆಟ್ಟಿಗರ ಮಜಾ

ವಿಡಿಯೋದಲ್ಲಿ ಅವರು ಹೇಳಿದ ಸರಳ ಮಾತನ್ನೇ ನೆಟ್ಟಿಗರು ತಮಾಷೆಯ ಕಂಟೆಂಟ್ ಆಗಿ ಬಳಸಿಕೊಳ್ಳಲು ಶುರು ಮಾಡಿದ್ದಾರೆ. ಮುರಿದುಬಿದ್ದ ಸಂಬಂಧಗಳು, ಹಾಳಾದ ಸ್ನೇಹ, ಸರಿಯಾಗಿ ನಿದ್ದೆ ಮಾಡದ ಸಮಸ್ಯೆ, ಚಳಿಗಾಲದಲ್ಲಿ ಬಿರುಕು ಬಿಡುವ ಹಿಮ್ಮಡಿಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ‘ಗ್ರೌಟ್ ಭರ್ ದೇಂಗೇ’ ಎಂದು ರೀಲ್ಸ್ ಮಾಡುತ್ತಿದ್ದಾರೆ.

ಇಷ್ಟೇ ಅಲ್ಲ, ಮದುವೆಯ ಹೆಣ್ಣಿನ ಮಾಂಗ್ (ಸಿಂಧೂರ ಧರಿಸುವ ಜಾಗ), ಜೇಬಿನಲ್ಲಿರುವ ರಂಧ್ರಗಳು ಹಾಗೂ ತಿಂಗಳ ಕೊನೆಯಲ್ಲಿ ಎದುರಾಗುವ ಬಜೆಟ್ ಸಮಸ್ಯೆಗಳಿಗೂ ಗ್ರೌಟ್ ತುಂಬಿ ಸರಿಪಡಿಸಬಹುದು ಎಂಬ ರೀತಿಯಲ್ಲಿ ತಮಾಷೆಯ ವಿಡಿಯೋಗಳು ಹರಿದಾಡುತ್ತಿವೆ.

ಅಷ್ಟಕ್ಕೂ ಗ್ರೌಟ್ ಎಂದರೇನು?

ಗ್ರೌಟ್ ಎನ್ನುವುದು ಸಾಮಾನ್ಯವಾಗಿ ಸಿಮೆಂಟ್, ನೀರು, ಕೆಲವೊಮ್ಮೆ ಮರಳು ಅಥವಾ ರಾಸಾಯನಿಕ ರೆಸಿನ್‌ಗಳನ್ನು ಬಳಸಿ ತಯಾರಿಸುವ ಪೇಸ್ಟ್‌ನಂತಹ ಮಿಶ್ರಣ. ಟೈಲ್ಸ್ ನಡುವಿನ ಖಾಲಿ ಜಾಗಗಳನ್ನು ತುಂಬಲು ಮತ್ತು ಜಾಯಿಂಟ್‌ಗಳನ್ನು ಮುಚ್ಚಲು ಇದನ್ನು ಬಳಸಲಾಗುತ್ತದೆ. ಇದರಿಂದ ನೀರು ಹಾಗೂ ಧೂಳು ಒಳಗೆ ಹೋಗುವುದನ್ನು ತಡೆಯಲು ಸಹಾಯವಾಗುತ್ತದೆ.

ಆದರೆ, ಈ ವಿಡಿಯೋ ವೈರಲ್ ಆದ ಬಳಿಕ ಗ್ರೌಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಕೆಲಸವೇ ಸಿಕ್ಕಂತಾಗಿದೆ. ನಿಜ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲದಿದ್ದರೂ, ರೀಲ್ಸ್‌ಗಳಲ್ಲಿ ಮಾತ್ರ ಎಲ್ಲವನ್ನೂ ಸರಿಪಡಿಸುವ ಮ್ಯಾಜಿಕ್ ಮಿಶ್ರಣವಾಗಿ ಇದು ಕಾಣಿಸಿಕೊಂಡಿದೆ.

ವೈರಲ್ ಆದ ವಿಡಿಯೋಗೆ ನಾಸಿಮ್ ಅಲ್ವಿ ಪ್ರತಿಕ್ರಿಯೆ

ತಮ್ಮ ವಿಡಿಯೋ ಇಷ್ಟೊಂದು ವೈರಲ್ ಆಗಿರುವುದನ್ನು ಕಂಡ ನಾಸಿಮ್ ಅಲ್ವಿ ಕೂಡ ಪ್ರತಿಕ್ರಿಯಿಸಿದ್ದು, ಜನರು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಜಿಲ್‌ನಲ್ಲಿ ಪ್ರವಾಹದ ಆರ್ಭಟ; ನೀರಿನಲ್ಲಿ ಕೊಚ್ಚಿಹೋದ ಅಂಗಡಿಗಳು | Brazil Flood

ಸಾಮಾನ್ಯ ಟೈಲ್ ರಿಪೇರಿ ಕೆಲಸದ ವಿಡಿಯೋದಿಂದ ಶುರುವಾದ ಈ ಟ್ರೆಂಡ್, ಈಗ ಸೋಶಿಯಲ್ ಮೀಡಿಯಾದಲ್ಲಿ ನಗುವಿನ ಅಲೆ ಎಬ್ಬಿಸಿದೆ. ಜೀವನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ, ಅವುಗಳನ್ನು ಒಂದೇ ಪರಿಹಾರದಿಂದ ಸರಿಪಡಿಸಬಹುದು ಎಂಬ ತಮಾಷೆಯ ಕಲ್ಪನೆಯೇ ಈ ಟ್ರೆಂಡ್‌ನ ವಿಶೇಷತೆ.