ನ್ಯೂಸ್

ಕಿಡಿಗೇಡಿಗಳ ಅಟ್ಟಹಾಸ! ಒಂದು ಎಕರೆಯಲ್ಲಿದ್ದ ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು

ಚಿಕ್ಕಮಗಳೂರು: ಆತ ತನ್ನ ಒಂದು ಎಕರೆಯಷ್ಟು ಭೂಮಿಯಲ್ಲಿ 200ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನೆಟ್ಟಿದ್ದ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಫಸಲು ಬರುತ್ತದೆ. ತಾನು ಬೆವರು ಹರಿಸಿ ಕಷ್ಟ ಪಟ್ಟದ್ದಕ್ಕೂ ಸಾರ್ಥಕವಾಗುತ್ತದೆ ಎಂದು ನಂಬಿದ್ದ. ಆದರೆ ರಾತ್ರಿ ಕಳೆದು ಬೆಳಗಾಗುವವ ಹೊತ್ತಲ್ಲಿ ರೈತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಕಾರಣ, ದುಷ್ಕರ್ಮಿಗಳ ಅಟ್ಟಹಾಸ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಲ್ಲಾಪುರದಲ್ಲಿ ರೈತ ರೇವಣ್ಣ ಎಂಬಾತ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನೆಟ್ಟು ಕೃಷಿ ಮಾಡುತ್ತಿದ್ದ. ಆದರೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳು ಅಷ್ಟೂ ಅಡಿಕೆ ಗಿಡಗಳನ್ನು ನಾಶ ಪಡಿಸಿದ್ದಾರೆ.

ನಿನ್ನೆ(ಫೆ.05) ರಾತ್ರಿ ರೇವಣ್ಣ ಕುಟುಂಬಸ್ಥರು ಜಾತ್ರೆಗೆ ತೆರಳಿದ್ದರು. ಇದೇ ಸಮಯವನ್ನು ನೋಡಿಕೊಂಡು ಬಂದ ದುಷ್ಕರ್ಮಿಗಳು ರೇವಣ್ಣ ನೆಟ್ಟಿದ್ದ ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿದ್ದ 200ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಕಡಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜಾತ್ರೆ ಮುಗಿಸಿ ಮನೆ ಸೇರಿದಾಗ ರೇವಣ್ಣ ಕುಟುಂಬಸ್ಥರು ಒಂದು ಕ್ಷಣ ಏನಾಗಿದೆ ಎಂಬುದನ್ನು ಅರ್ಥೈಸಿಕೊಳ್ಳದ ಪರಿಸ್ಥಿಗೆ ಬಂದಿದ್ದಾರೆ.

ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಅಡಿಕೆ ಗಿಡ ನಾಶ ಪಡಿಸಿರುವ ಬಗ್ಗೆ ಇದೀಗ ಸಂತ್ರಸ್ತ ರೈತ ರೇವಣ್ಣ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳ ಪತ್ತೆಯಿಂದ ಅಡಿಕೆ ಗಿಡಗಳನ್ನು ಕಡಿಯಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.