ನ್ಯೂಸ್

'ಕಾಂತಾರ' ಕಿಡಿ! ಚಿತ್ರತಂಡ ಷರತ್ತು ಉಲ್ಲಂಘಿಸಿದ್ದರೆ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ | Kantara

ಹಾಸನ: ಸಕಲೇಶಪುರ ತಾಲೂಕಿನ ಯಸಳೂರು ವಲಯದ ಶನಿವಾರಸಂತೆ ಬಳಿ ಹೇರೂರು ಗ್ರಾಮದ ಗವಿಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಸುತ್ತಿರುವ ರಿಷಬ್​ ಶೆಟ್ಟಿ ನಟನೆಯ 'ಕಾಂತಾರ' (Kantara) ಚಿತ್ರತಂಡ ಷರತ್ತು ಉಲ್ಲಂಘಿಸಿದ್ದರೆ ಚಿತ್ರೀಕರಣ ನಿರ್ಬಂಧಿಸಿ, ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಎಚ್ಚರಿಸಿದ್ದಾರೆ.

ಕಾಡಿನಲ್ಲಿ ಬೆಂಕಿ ಹಚ್ಚಿ, ಪಟಾಕಿ ಸಿಡಿಸುವ ಮೂಲಕ ಚಿತ್ರತಂಡ ತೊಂದರೆ ಉಂಟು ಮಾಡುತ್ತಿದೆ ಎಂದು ಹೇರೂರು ಗ್ರಾಮಸ್ಥರು ಆರೋಪಿಸಿರುವುದಾಗಿ ವರದಿಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಗವಿಬೆಟ್ಟ ಮತ್ತು ಸುತ್ತಮುತ್ತಲ ಪರಿಭಾವಿತ ಅರಣ್ಯದ ಅಂಚಿನ ಗೋಮಾಳದಲ್ಲಿ 23 ದಿನ ಕಾಂತಾರ ಭಾಗ 1ರ ಚಿತ್ರೀಕರಣ ನಡೆಸಲು ಹೊಂಬಾಳೆ ಫಿಲ್ಮ್ಸ್​ ಚಿತ್ರತಂಡ ಅನುಮತಿ ಕೋರಿತ್ತು. ಇದಕ್ಕೆ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಷರತ್ತುಬದ್ಧ ಅನುಮತಿ ನೀಡಿದ್ದಾರೆ" ಎಂದರು.

"ಆದರೆ ಕಾಂತಾರ ತಂಡ ಚಿತ್ರೀಕರಣದ ವೇಳೆ ಸ್ಫೋಟಕ ವಸ್ತುಗಳನ್ನು ಬಳಸುತ್ತಿದ್ದು, ಇದರಿಂದ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇಂದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ತಿಳಿಸಿದ್ದೇನೆ. ಚಿತ್ರತಂಡದಿಂದ ಒಂದೊಮ್ಮೆ ಷರತ್ತುಗಳ ಉಲ್ಲಂಘನೆಯಾಗಿ, ವನ್ಯಜೀವಿಗಳಿಗೆ ಅಥವಾ ಸಸ್ಯ ಸಂಕುಲಕ್ಕೆ ಯಾವುದೇ ಹಾನಿ ಮಾಡಿದ್ದಲ್ಲಿ ತಕ್ಷಣವೇ ಚಿತ್ರೀಕರಣ ಸ್ಥಗಿತಗೊಳಿಸಲು ಮತ್ತು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಹೇಳಿದರು.

"ಇನ್ನು ನಟ ಯಶ್​ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರತಂಡಕ್ಕೆ, ಎಚ್.ಎಂ.ಟಿ.ಯಿಂದ ಭೂಮಿ ಖರೀದಿಸಿರುವ ಕೆನರಾ ಬ್ಯಾಂಕ್ ಗುತ್ತಿಗೆ ನೀಡಿದ್ದು, ಮೂರು ಸಂಸ್ಥೆ ಮೇಲೆ ಎಫ್​ಐಆರ್ ದಾಖಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಘನ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಇದರ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ" ಎಂದು ತಿಳಿಸಿದರು.