ವಿಜಯವಾಡ: ಸ್ಕಿಲ್ ಡೆವೆಲಪ್ಮೆಂಟ್ ಹಗರಣದಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಂಧನವಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ವಿಚಾರವಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರಿಗೆ ಕರೆ ಮಾಡಿ ಮಾತನಾಡಿರುವುದನ್ನು ಸಚಿವೆ ರೋಜಾ ಖಂಡಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರನ್ನು ರಾಜಮುಂಡ್ರಿ ಜೈಲಿನಲ್ಲಿ ಇರಿಸಲಾಗಿದೆ. ಅವರ ಸಾರ್ವಜನಿಕ ಜೀವನ, ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸಿ ಮನೆಯಿಂದ ತಂದ ಆಹಾರ ನೀಡಲು, ಔಷಧ ಮಾತ್ರೆಗಳಿಗೆ ಅನುಮತಿ ಮತ್ತು ಜೈಲಿನಲ್ಲಿ ಪ್ರತ್ಯೇಕ ಕೊಠಡಿಯನ್ನು ನಿಗದಿಪಡಿಸಿ ನ್ಯಾಯಾಲಯ ಆದೇಶಿಸಿದೆ.
ಆಂಧ್ರದ ಸಿಐಡಿ ಪೊಲೀಸರು ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದು, ವಿಚಾರಣೆ ಸಹ ನಡೆಸುತ್ತಿದೆ. ಇದರ ನಡುವೆ ನಾಯ್ಡು ಅವರು ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರ ವಿಚಾರಣೆ ಸೆ. 19ರಂದು ನಡೆಯಲಿದೆ. ಇದೇ ಸಂದರ್ಭದಲ್ಲಿ ನಟ ರಜನಿಕಾಂತ್ ಅವರು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ಆಂಧ್ರ ರಾಜ್ಯದ ಪರಿಸರ ಸಚಿವೆ ಹಾಗೂ ನಟಿ ರೋಜಾ ಖಂಡಿಸಿದ್ದಾರೆ.
ನಾಯ್ಡು ಅವರನ್ನು ಬೆಂಬಲಿಸುವುದರಿಂದ ರಜನಿ ಅವರ ಗೌರವ ಕಡಿಮೆಯಾಗುತ್ತದೆ. ಜನ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿ ರಜನಿ ರಾಜಕೀಯಕ್ಕೆ ಬರಲಿಲ್ಲ ಎಂದು ರೋಜಾ ಆರೋಪಿಸಿದ್ದಾರೆ. ಜನಕಲ್ಯಾಣಕ್ಕಾಗಿ ಜೈಲಿಗೆ ಹೋಗಿ ಬಂದವರನ್ನು ಬೆಂಬಲಿಸಿದರೆ ಸರಿ ಆದರೆ, ರಜನಿ ಕಳ್ಳರನ್ನು ಏಕೆ ಬೆಂಬಲಿಸುತ್ತಾರೆ? ಎಂಬ ಪ್ರಶ್ನಿಸಿದ್ದಾರೆ.
ಚಂದ್ರಬಾಬು ನಾಯ್ಡು ಒಳ್ಳೆಯವರು ಎಂದು ಹೇಳಿದರೆ ಜನ ನಂಬುವುದಿಲ್ಲ. ಹಣ ದೋಚುವವರಿಗೆ ಸಾಂತ್ವನ ಹೇಳುವುದರ ಅರ್ಥವೇನು? ಅವರು ಜನರಿಗೆ ಯಾವ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರೋಜಾ ರಜನಿಕಾಂತ್ ಅವರನ್ನು ಪ್ರಶ್ನಿಸಿದ್ದಾರೆ.
ನಾರಾ ಲೋಕೇಶ್ ಅವರಿಗೆ ಕರೆ ಮಾಡಿದ ರಜನಿಕಾಂತ್ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ತರನ್ನು ಉತ್ತಮ ಸ್ನೇಹಿತ ಮತ್ತು ಹೋರಾಟಗಾರ ಎಂದು ಕರೆದರು ಮತ್ತು ಯೋಗಕ್ಷೇಮವನ್ನು ವಿಚಾರಿಸಿದರು. ನನ್ನ ಸ್ನೇಹಿತ ಎಂದಿಗೂ ತಪ್ಪು ಮಾಡುವುದಿಲ್ಲ. ನಾಯ್ಡು ಮಾಡಿರುವ ಅಭಿವೃದ್ಧಿ ಹಾಗೂ ಒಳ್ಳೆಯ ಕೆಲಸಗಳು ಅವರನ್ನು ರಕ್ಷಿಸುತ್ತವೆ ಮತ್ತು ಅಕ್ರಮ ಬಂಧನದಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ರಜನಿಕಾಂತ್ ಅವರು ಲೋಕೇಶ್‌ಗೆ ತಿಳಿಸಿದರು. ನಾಯ್ಡು ಅವರು ಮಾಡಿರುವ ಜನಸೇವೆ ಹಾಗೂ ಉತ್ತಮ ಕೆಲಸಗಳಿಂದ ಬೇಗ ಹೊರಬರಲಿ ಎಂದು ಹಾರೈಸಿದರು.
ಇನ್ನು ಟಿಡಿಪಿ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮ ರಾವ್ ಅವರ ಶತಮಾನೋತ್ಸವ ಸಮಾರಂಭದಲ್ಲಿ ನಾಯ್ಡು ಅವರೊಂದಿಗೆ ರಜನಿಕಾಂತ್ ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವರ್ಷದ ಏಪ್ರಿಲ್‌ನಲ್ಲಿ ವಿಜಯವಾಡದಲ್ಲಿ ಶತಮಾನೋತ್ಸವ ಸಮಾರಂಭ ನಡೆದಿತ್ತು. (ಏಜೆನ್ಸೀಸ್)