ನ್ಯೂಸ್

ಹೊಸ ಆಲೋಚನೆಗಳ ಇನ್ವೆಸ್ಟ್ ಕರ್ನಾಟಕ: ಮುರುಗೇಶ್ ನಿರಾಣಿ ಸ್ಪಷ್ಟೋಕ್ತಿ; ಉದ್ದೇಶ, ಪ್ರಯತ್ನ, ನಿರೀಕ್ಷೆಗಳ ಅನಾವರಣ

ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿಗೊಳಿಸುವ ಮೂಲಕ ನಾಡಿನ ಬೆಳವಣಿಗೆಗೆ ಕೊಡುಗೆ ನೀಡಬೇಕೆಂಬ ಮಹದೋದ್ದೇಶ ಹೊಂದಿರುವ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಇನ್ವೆಸ್ಟ್ ಕರ್ನಾಟಕದ ಉದ್ದೇಶ, ಪ್ರಯತ್ನ, ನಿರೀಕ್ಷೆಗಳ ಬಗ್ಗೆ ಮನದಾಳವನ್ನು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಈ ಬಾರಿ ಸಮಾವೇಶ ಹಿಂದಿನಂತಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

  • ಹಲವು ಹೂಡಿಕೆದಾರರ ಸಮಾವೇಶ ನಡೆದಿದೆ, ಈ ಬಾರಿ ಹೇಗೆ ಭಿನ್ನ?

2016ರಲ್ಲಿ ಕಾಟಾಚಾರದ ಸಮಾವೇಶ ಮಾಡಲಾಯಿತು. ಆದರೆ ಈ ಬಾರಿ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಂಬರ್ ತೋರಿಸಲು ವೇದಿಕೆಯಲ್ಲಿ ಎಂಒಯು ಮಾಡಿದ ಉದಾಹರಣೆ ಇದೆ. ಆದರೆ, ಈ ಬಾರಿ ಏಕಗವಾಕ್ಷಿ ಸಮಿತಿ ಅಥವಾ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಲ್ಲಿ ಅನುಮೋದನೆಗೊಂಡವರೊಂದಿಗೆ ಮಾತ್ರ ಒಡಂಬಡಿಕೆಯಾಗುತ್ತಿದೆ. ಹೀಗಾಗಿ ಹೆಚ್ಚು ಹೂಡಿಕೆ ಬರುವುದು ನಿಶ್ಚಿತ. ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ, ಆಸಕ್ತಿ ಇದ್ದವರಿಗಷ್ಟೇ ಅವಕಾಶ ನೀಡಲಾಗಿದೆ.

  • ‘ಬ್ಯುಲ್ಡ್ ಫಾರ್ ದ ವರ್ಲ್ಡ್’ ಏನಿದು ಪರಿಕಲ್ಪನೆ ಮತ್ತು ಬಿಯಾಂಡ್ ಬೆಂಗಳೂರು ಪ್ರಯತ್ನ ಏನಾಗಿದೆ?

ಸಣ್ಣದಾಗಿ ಯೋಚಿಸದೇ ಜಾಗತಿಕವಾಗಿ ಆಲೋಚನೆ ಮಾಡಿ ಸಮಾವೇಶ ನಡೆಸಲಾಗುತ್ತಿದೆ. ಇದು ದೇಶ, ರಾಜ್ಯ, ರಾಜ್ಯದ ಯಾವುದೋ ಒಂದು ಪ್ರದೇಶದ ಉದ್ದೇಶ ಇಟ್ಟುಕೊಂಡು ಸಮಾವೇಶ ನಡೆಸದೆಯೇ ಜಾಗತಿಕ ಕಲ್ಪನೆಯಲ್ಲಿ ನಡೆಸಲಾಗುತ್ತಿದೆ. ಈ ಕಾರಣಕ್ಕೆ ‘ಬ್ಯುಲ್ಡ್ ಫಾರ್ ದ ವರ್ಲ್ಡ್’ ಪರಿಕಲ್ಪನೆ ನೀಡಲಾಗಿದೆ. ಇನ್ನು ಬೆಂಗಳೂರು ಹೊರತುಪಡಿಸಿ ಇತರ ಕಡೆಗಳಲ್ಲಿ ಉದ್ಯಮಗಳು ಸ್ಥಾಪನೆಯಾಗಬೇಕೆಂಬ ಕಾರಣಕ್ಕೆ ಹೂಡಿಕೆದಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಬೆಂಗಳೂರು ಸುತ್ತಮುತ್ತ 20 ಸಾವಿರ ಎಕರೆ, ಬೆಂಗಳೂರು ಹೊರತು ಇತರ ಕಡೆ 30 ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ. 2, 3ನೇ ಹಂತದ ನಗರಗಳಲ್ಲಿ ಹೂಡಿಕೆಗೆ ಒತ್ತು ನೀಡಲಾಗುತ್ತಿದೆ. ಮೂಲ ಸೌಕರ್ಯ ಕೊಡದೇ ಹೂಡಿಕೆಯಾಗಲ್ಲ ಎಂಬ ಸ್ಪಷ್ಟ ಅರಿವಿದೆ. ಶಿವಮೊಗ್ಗ, ವಿಜಯಪುರ, ಹಾಸನ ವಿಮಾಣ ನಿಲ್ದಾಣ ಶೀಘ್ರವೇ ಸಿದ್ಧವಾಗುತ್ತಿದೆ. ಮುಂದಿನ 18-24 ತಿಂಗಳಲ್ಲಿ ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರಲ್ಲಿ ವಿಮಾನ ನಿಲ್ದಾಣ ಸಿದ್ಧವಾಗಬೇಕೆಂಬ ಗುರಿ ಇದೆ. ಕೊಪ್ಪ ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ದೇಶವಿದೆ.

  • ಜಾಗತಿಕ ಆರ್ಥಿಕ ಕುಸಿತದ ಬಗ್ಗೆ ಚರ್ಚೆಯಾಗುತ್ತಿದೆ. ಹೀಗಿರುವಾಗ ಯಾವ ವಿಶ್ವಾಸದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಾರೆ?

ರಷ್ಯಾ- ಉಕ್ರೇನ್ ಯುದ್ಧ, ಚೈನಾ ಬ್ಯಾನ್ ಕಾರಣದಿಂದ ಭಾರತಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಹೆಚ್ಚಿನ ಲಾಭವಾಗುತ್ತಿದೆ. ಹೂಡಿಕೆಗೆ ಬೆಂಗಳೂರು ಸೂಕ್ತ ಎಂಬ ವಾತಾವರಣ ಇದೆ. ಇಲ್ಲಿ ಕೈಗಾರಿಕಾ ಸ್ನೇಹಿ ಪರಿಸರವಿದೆ. ಕೌಶಲ, ಅರೆ ಕೌಶಲ ಮಾನವ ಸಂಪನ್ಮೂಲ ಹೇರಳವಾಗಿದ್ದು, ವರ್ಕ್ ಕಲ್ಚರ್ ಕೂಡ ಉತ್ತಮವಾಗಿದೆ. ನಮಗಿಂತ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿಗೆ ಬೆಂಗಳೂರಿನ ಮೇಲೆ ವಿಶ್ವಾಸವಿದೆ. ವಿದೇಶಿ ಹೂಡಿಕೆಯಲ್ಲಿ ಕರ್ನಾಟಕವೇ ನಂಬರ್ ಒನ್. ಈಸ್ ಆಫ್ ಡೂಯಿಂಗ್ ಬಿಜಿನೆಸ್​ನಲ್ಲೂ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ.

  • ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಯಾವ ಪ್ಲಾ್ಯನ್ ಮಾಡಿದ್ದೀರಿ?

5 ಕಡೆಗಳಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಮಾಡುತ್ತೇವೆ. ಒಂದೊಂದು ಡಿವಿಜನ್​ನಲ್ಲಿ ಒಂದೊಂದು ಟೌನ್​ಶಿಪ್ ಇರಲಿದೆ. ಎರಡು ಸಾವಿರ ಎಕರೆಯಲ್ಲಿ ಪ್ರತಿ ಟೌನ್​ಶಿಪ್ ನಿರ್ವಣವಾಗಲಿದೆ. ಅಗತ್ಯ ನೀರಿನ ಲಭ್ಯತೆ, ವಿಮಾನ ಯಾನದ ಸಂಪರ್ಕ ಎಲ್ಲವನ್ನೂ ನೋಡಿಕೊಂಡೇ ಸರ್ಕಾರದ ಭೂಮಿ ಲಭ್ಯ ಇರುವಕಡೆ ಆದ್ಯತೆ ಮೇಲೆ ಮಾಡಲಾಗುತ್ತದೆ. ಚಂಡೀಗಢ ಆಥವಾ ಇನ್ಯಾವುದೇ ಮಾದರಿ ಟೌನ್​ಶಿಪ್​ಗಿಂದ ಮಾಡ್ರನ್ ಆಗಿರುವ ಟೌನ್​ಶಿಪ್ ನಿರ್ವಿುಸುತ್ತೇವೆ. ಇದರಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ.

  • ಹೂಡಿಕೆದಾರರ ಸಮಾವೇಶದಲ್ಲಿ ಆಗುವ ಒಡಂಬಡಿಕೆಗಳ ಅನುಷ್ಠಾನಕ್ಕೆ ಯಾವ ರೀತಿಯಲ್ಲಿ ಈ ಬಾರಿ ಗಮನ ಕೊಡಲಾಗುತ್ತಿದೆ?

ಹೂಡಿಕೆದಾರರು ಒಡಂಬಡಿಕೆ ಮಾಡಿಕೊಂಡರೆ ಸಾಲದು ಅನುಷ್ಠಾನ ಮುಖ್ಯ. ಹೂಡಿಕೆದಾರರು ವಿವಿಧ ಲೈಸೆನ್ಸ್​ಗಾಗಿ ಕಾಯಬೇಕಿಲ್ಲ. ಅಫಿಡೆವಿಟ್ ನೀಡಿ ಭೂಮಿ ಪೂಜೆ ಮಾಡಿ ಕೆಲಸ ಆರಂಭಿಸಬಹುದು. ಘಟಕ ಪೂರ್ಣ ಸಿದ್ಧವಾಗುವ ಹೊತ್ತಿಗೆ ಅಗತ್ಯ ಲೈಸೆನ್ಸ್ ಪಡೆದುಕೊಂಡರೆ ಸಾಕಾಗುತ್ತದೆ. ಅಲ್ಲದೆ, ಹೂಡಿಕೆಯ ಮೊತ್ತಕ್ಕೆ ಅನುಗುಣವಾಗಿ ಒಬ್ಬೊಬ್ಬ ಐಎಎಸ್ ಅಧಿಕಾರಗಳನ್ನು ನೇಮಿಸಲಾಗುತ್ತಿದೆ.

  • ಓಲಾ, ಕಿಯಾ ನೆರೆ ರಾಜ್ಯದ ಪಾಲಾದವು. ಸರ್ಕಾರ ಅವಕಾಶ ತಪ್ಪಿಸಿಕೊಂಡಿತೇ?

ಬೇರೆ ರಾಜ್ಯಕ್ಕೆ ಹೋಗಿದ್ದು ನಿಜ. ವೇದಾಂತ ಗ್ರೂಪ್​ನ ಅನಿಲ್ ಅಗರವಾಲ್ ಗುಜರಾತ್​ನಲ್ಲಿ ಹೂಡಿಕೆ ಘೋಷಣೆ ಮಾಡಿದರು. ಇನ್ನೊಂದು ದೆಹಲಿ ಪಾಲಾಯಿತು. ಕೆಲವು ರಾಜ್ಯಗಳು ಹತ್ತು ಹಲವು ಆಫರ್ ನೀಡಿ ಕರೆದುಕೊಂಡು ಹೋಗುತ್ತವೆ. ನಂತರ ಕೊಟ್ಟ ಮಾತು ಉಳಿಸಿಕೊಳ್ಳುವುದೇ ಇಲ್ಲ. ಹೂಡಿಕೆದಾರರಿಗೂ ಇದರ ಅನುಭವ ಆಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಸರ್ಕಾರಗಳು ಬದಲಾದರೂ ಪಾಲಿಸಿ ಮುಂದುವರಿಸಿಕೊಂಡು ಹೋಗುವ ಸಂಪ್ರದಾಯ ಇದೆ.