ಲಖನೌ: ಕೆಲಸಕ್ಕೆ ಹೋಗುವ ವೇಳೆ ತುಂಬಾ ಲೇಟ್ ಆಗಿದ್ದ್ರರೆ ನಾವು ನಿಯಮಗಳನ್ನು ಗಾಳಿಗೆ ತೂರಿ ಮುಂದಕ್ಕೆ ಹೋಗುತ್ತೇವೆ. ಇದೀಗ ಅದೇ ರೀತಿಯ ಘಟನೆಯೊಂದರಲ್ಲಿ ಸಚಿವರೊಬ್ಬರು ಈ ರೀತಿ ಮಾಡುವ ಮೂಲಕ ಸುದ್ದಿಯಲ್ಲಿದ್ದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದಾರೆ.
ಉತ್ತರಪ್ರದೇಶ ಸರ್ಕಾರದಲ್ಲಿ ಪಶು ಸಂಗೋಪನಾ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಧರಮ್ಪಾಲ್ ಸಿಂಗ್ ರೈಲಿಗೆ ಹೊತ್ತಾಯಿತು ಎಂಬ ಕಾರಣಕ್ಕೆ ತಮ್ಮ ಕಾರನ್ನು ನೇರ ಪ್ಲಾಟ್ಫಾರ್ಮ್ಗೆ ಒಳಗೆ ನುಗ್ಗಿಸಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಈ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ ಎಂದು ಹಲವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಮೈಸೂರಿನಲ್ಲಿ ನಡೆಸುತ್ತಿರುವ ಹಿಂದೆ ರಾಜಕೀಯ ಉದ್ದೇಶವಿಲ್ಲ: ಡಿ.ಕೆ. ಶಿವಕುಮಾರ್
ಸಚಿವ ಧರಮ್ಪಾಲ್ ಸಿಂಗ್ ಕಾರ್ಯಕ್ರಮದ ನಿಮಿತ್ತ ಲಖನೌನಿಂದ ಬರೇಲಿಗೆ ರೈಲಿನಲ್ಲಿ ತೆರಳಬೇಕಿತ್ತು. ರೈಲ್ವೆ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ ಕಾರಣ ಅವರ ವಾಹನದ ಚಾಲಕ ಕಾರನ್ನು ಅಂಗವಿಕಲರಿಗೆ ಮೀಸಲಿಟ್ಟಿದ್ದ ರ‍್ಯಾಂಪ್ ಮೂಲಕ ಪ್ಲಾಟ್ಫಾರ್ಮ್ ಪ್ರವೇಶಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಅಖಿಲೇಶ್ ಯಾದವ್ ಸಚಿವರು ಪ್ಲಾಟ್ಫಾರ್ಮ್ಗೆ ಬುಲ್ಡೋಜರ್ ಕೊಂಡೊಯ್ಯದಿದ್ದಕ್ಕೆ ಜನರು ಅವರಿಗೆ ಕೃತಜ್ಞರಾಗಿರಬೇಕು ಟೀಕಿಸಿದ್ದಾರೆ. ಘಟನೆ ಕುರಿತು ಸಚಿವ ಧರಮ್ಪಾಲ್ ಸಿಂಗ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.